
ಎಂಆರ್‌ಪಿಎಲ್ ನಲ್ಲಿ ಆಸ್ಟ್ರಿಯಾದ ಪೋರ್ನರ್‌ನ ಬಿಟುಮೆನ್ ಸೊಲ್ಯೂಷನ್ಸ್‌ನಲ್ಲಿನ ಸುಧಾರಿತ ಬಿಟುರಾಕ್ಸ್ ತಂತ್ರಜ್ಞಾನ ಸ್ಥಾವರ ಕಾರ್ಯಾರಂಭ
Tuesday, December 17, 2024
ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಆಸ್ಟ್ರಿಯಾದ ಪೋರ್ನರ್‌ನ ಬಿಟುಮೆನ್ ಸೊಲ್ಯೂಷನ್ಸ್‌ನಲ್ಲಿನ ಸುಧಾರಿತ ಬಿಟುರಾಕ್ಸ್ ತಂತ್ರಜ್ಞಾನದಿಂದ ತನ್ನ ಹೊಸ ಬಿಟುಮೆನ್(ಡಾಂಬರು) ಉತ್ಪಾದನಾ ಸ್ಥಾವರ ಕಾರ್ಯಾರಂಭಿಸಿದೆ. ಪ್ರಧಾನ ಭಾರತೀಯ ಸಲಹಾ ಸಂಸ್ಥೆಯಾದ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನಿಂದ ವಿನ್ಯಾಸಗೊಳಿಸಲ್ಪಟ್ಟ ಹೆಚ್ಚುವರಿ ಸ್ಥಾವರ ಎಂಆರ್‌ಪಿಎಲ್ ಮತ್ತು ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಲಿದೆ.
ವಾರ್ಷಿಕ 1,50,000 ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಈ ಹೊಸ ಘಟಕ ಬಿಟುಮೆನ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದೆ. ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಆಮದು ಮಾಡಿಕೊಂಡ ಬಿಟುಮೆನ್‌ನ್ನು ಅವಲಂಬಿಸಲಾಗಿದೆ. ಈಗ ಎಂಆರ್‌ಪಿಎಲ್‌ನಲ್ಲೇ ಅತ್ಯಾಧುನಿಕ ಗುಣಮಟ್ಟದಲ್ಲಿ ಬಿಟುಮೆನ್‌ನ್ನು ಉತ್ಪಾದಿಸಲಾಗುತ್ತಿದೆ.
ಎಂಆರ್‌ಪಿಎಲ್ ತನ್ನ ಬಿಟುಮೆನ್ ಉತ್ಪಾದನಾ ಸಾಮರ್ಥ್ಯವನ್ನು 2022ರಲ್ಲಿ ವಿಸ್ತರಿಸಿತ್ತು. ಈಗ ಹೊಸದಾಗಿ ಸ್ಥಾಪಿಸಲಾದ ಸ್ಥಾವರವನ್ನು ಉತ್ತಮ ಗುಣಮಟ್ಟದ VG40 ಬಿಟುಮೆನ್ ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ VG30 ಮತ್ತು ಇತರ ಶ್ರೇಣಿಗಳನ್ನು ಕೂಡ ಉತ್ಪಾದಿಸಲಿದೆ.
ಭಾರತದಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಬಿಟುಮೆನ್ ಪೂರೈಕೆಗೆ ಬದ್ಧವಾಗಿದೆ. ಇದು ಆತ್ಮನಿರ್ಭರ ಭಾರತ್‌ನ ಉದ್ದೇಶವನ್ನು ಈಡೇರಿಸಲಿದೆ ಎಂದು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆಗಳು) ಬಿಎಚ್‌ವಿ ಪ್ರಸಾದ್ ತಿಳಿಸಿದ್ದಾರೆ.