
ಜಿಎಸ್‌ಟಿ-ಆನ್‌ಲೈನ್ ಕುಂದುಕೊರತೆ ನಿವಾರಣೆಗೆ ಕ್ರಮ: ಎಸ್. ಕೇಶವ ನಾರಾಯಣ ರೆಡ್ಡಿ
ಮಂಗಳೂರು: ಉದ್ಯಮಿಗಳಿಗೆ ಮರುಪಾವತಿಯಂತಹ ಜಿಎಸ್‌ಟಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಆನ್‌ಲೈನ್ ಕುಂದುಕೊರತೆ ನಿವಾರಣೆಗೆ ಸಮಗ್ರ ಕಾರ್ಯಯೋಜನೆಯನ್ನು ಜಾರಿಗೆ ತರಲಿದೆ ಎಂದು ಕೇಂದ್ರ ತೆರಿಗೆ ಮತ್ತು ಜಿಎಸ್‌ಟಿ ಮಂಗಳೂರು ಆಯುಕ್ತ ಎಸ್. ಕೇಶವ ನಾರಾಯಣ ರೆಡ್ಡಿ ಹೇಳಿದ್ದಾರೆ.
ಮಂಗಳೂರಿನ ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಕೆಸಿಸಿಐ) ಆಯೋಜಿಸಿದ ‘ಜಿಎಸ್‌ಟಿ ಆಮ್ನೆಸ್ಟಿ ಸ್ಕೀಮ್-2024 ಹಾಗೂ ನಕಲಿ ಇನ್‌ವಾಯ್ಸ್‌ಗಳು ಮತ್ತು ಅವುಗಳ ಪರಿಣಾಮ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಸಚಿವಾಲಯದ ಸಮನ್ವಯದಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. ನಿಗದಿತ ಸ್ವರೂಪದಲ್ಲಿ ರಿಟರ್ನ್‌ಗಳನ್ನು ಸಲ್ಲಿಸಿದಾಗ, ಮರುಪಾವತಿಯು ತೊಂದರೆಯಿಲ್ಲದೆ ಪಾವತಿಗೊಳ್ಳುತ್ತದೆ. ಕ್ರೆಡಿಟ್‌ನ್ನು ತಡೆರಹಿತ ರೀತಿಯಲ್ಲಿ ಪಡೆಯಲಾಗುತ್ತದೆ. ಜಿಎಸ್‌ಟಿ ಬಗ್ಗೆ ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ವ್ಯಾಜ್ಯಗಳು ಗಣನೀಯವಾಗಿ ಕಡಿಮೆಯಾಗಲು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಆಧುನೀಕರಿಸಲಾಗುತ್ತಿದೆ. ಕುಂದುಕೊರತೆ ಪರಿಹಾರ ಕಾರ್ಯವಿಧಾನದೊಂದಿಗೆ, ಉದ್ಯಮಿಗಳು ಭವಿಷ್ಯದಲ್ಲಿ ಕೋರ್ಟ್‌ಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ. ಎಂಎಸ್‌ಎಂಇಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.
ವ್ಯಾಪಾರ ಮತ್ತು ಉದ್ಯಮದ ಸಿಬ್ಬಂದಿಗೆ ಸುಲಭವಾಗಿ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಜಿಎಸ್‌ಟಿ ಕಾಯಿದೆಯಡಿಯಲ್ಲಿ ಸರ್ಕಾರ ಹಲವಾರು ನಿಬಂಧನೆಗಳನ್ನು ಸಡಿಲಗೊಳಿಸಿದೆ. ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸುವ ಹಲವು ಕಾರ್ಯವಿಧಾನಗಳನ್ನು ಸರಳಗೊಳಿಸಲಾಗಿದೆ ಮತ್ತು ವಿಭಾಗಗಳನ್ನು ತಿದ್ದುಪಡಿ ಮಾಡಲಾಗಿದೆ. ಇದು ಉದ್ಯಮಿಗಳಿಗೆ ಪ್ರಮುಖ ವ್ಯವಹಾರಗಳ ಮೇಲೆ ಕೇಂದ್ರೀಕರಿಸಲು ಸಹಾಯವಾಗಲಿದೆ ಎಂದರು.
ಜಿಎಸ್‌ಟಿಯ ಆಧುನೀಕರಣದ ಭಾಗವಾಗಿ ಅಟೊಮೇಷನ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಅಧಿಕಾರಿಗಳೊಂದಿಗೆ ಸಂವಹನದ ವ್ಯವಸ್ಥೆಯೂ ತಾಂತ್ರಿಕವಾಗಲಿದೆ. ಭೌತಿಕ ಸಂವಹನವನ್ನು ಕಡಿಮೆ ಮಾಡುವುದರಿಂದ ಇನ್ನು ಮುಂದೆ ವಿಶ್ವದ ಎಲ್ಲಿಯೂ ಕಾರ್ಯನಿರ್ವಹಿಸಬಹುದಾಗಿದೆ.
ಕೇಂದ್ರ ತೆರಿಗೆ ಮತ್ತು ಜಿಎಸ್‌ಟಿ, ಮಂಗಳೂರು ಹೆಚ್ಚುವರಿ ಆಯುಕ್ತ ಡಾ.ಸೋಮಣ್ಣ ಮಾತನಾಡಿ, ಪ್ರಧಾನಮಂತ್ರಿ ಮಿಷನ್ ಕರ್ಮಯೋಗಿ ಅಡಿಯಲ್ಲಿ ಅಧಿಕಾರಿಗಳು ಮತ್ತು ಮಧ್ಯಸ್ಥಗಾರರಿಗೆ ಡೊಮೈನ್ ಜ್ಞಾನ, ವರ್ತನೆಯ ತರಬೇತಿ ಮತ್ತು ಮೃದು ಕೌಶಲ್ಯಗಳಂತಹ ನಾನಾ ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ ಉತ್ತರ ಕನ್ನಡ ವಿಭಾಗ ಕಾರವಾರ ಇದರ ಸಹಾಯಕ ಆಯುಕ್ತ ಗೋವಿಂದನ್ ಆರ್ ಮತ್ತು ಡಿಜಿಜಿಐ ಮಂಗಳೂರು ಪ್ರಾದೇಶಿಕ ಘಟಕದ ಸಹಾಯಕ
ನಿರ್ದೇಶಕ ರಾಜೇಶ್ ಶೆಟ್ಟಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕೆಸಿಸಿಐ ಅಧ್ಯಕ್ಷ ಆನಂದ್ ಜಿ. ಪೈ, ಉಪಾಧ್ಯಕ್ಷ ಬಿ.ಅಹಮದ್ ಮುದಾಸರ್, ಕಾರ್ಯದರ್ಶಿ ಅಶ್ವಿನ್ ಪೈ ಎಂ, ಗೌರವ ಕೋಶಾಧಿಕಾರಿ ಅಬ್ದುರ್ ರೆಹಮಾನ್ ಮುಸ್ಬಾ, ಕೆಸಿಸಿಐ ಗೌರವ ನಿರ್ದೇಶಕ ಆದಿತ್ಯ ಪದ್ಮನಾಭ ಪೈ, ಕೆಸಿಸಿಐ ಜಿಎಸ್‌ಟಿ ಉಪ ಸಮಿತಿ ಅಧ್ಯಕ್ಷ ಕೇಶವ ಎನ್ ಬಳ್ಳಕ್ಕುರಾಯ ಉಪಸ್ಥಿತರಿದ್ದರು.