
ವೀರ್ ಬಾಲ್ ದಿವಸ್ ಆಚರಣೆ: ಕೂಳೂರು ಗುರುದ್ವಾರದಲ್ಲಿ ಗೌರವ ನಮನ ಸಲ್ಲಿಸಿದ ಸಂಸದ ಕ್ಯಾ. ಚೌಟ
Thursday, December 26, 2024
ಮಂಗಳೂರು: ‘ವೀರ್ ಬಾಲ್ ದಿವಸ್’ ಅಂಗವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪಾಲಿಕೆ ಸದಸ್ಯ ಕಿರಣ್ ಕುಮಾರ್ ಅವರೊಂದಿಗೆ ನಗರದ ಕೂಳೂರು ಕೊಟ್ಟಾರ ಚೌಕಿಯಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಎಳೆಯ ಪುತ್ರರಾಗಿದ್ದ ಸಾಹಿಬ್ಜಾದೋಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಅಪ್ರತಿಮ ತ್ಯಾಗಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಸಿಖ್ ಗುರು ಗೋಬಿಂದ್ ಸಿಂಗ್ ಅವರ ಮಕ್ಕಳ ತ್ಯಾಗವನ್ನು ಗೌರವಿಸುವ ವೀರ್ ಬಾಲ್ ದಿವಸ್ ಆಚರಣೆಯೂ ಮಹತ್ವದಾಗಿದ್ದು, ಈ ದಿನವು ಸಿಖ್ ಧರ್ಮದ ಅನುಯಾಯಿಗಳಿಗೆ ಮಾತ್ರವಲ್ಲದೆ ಎಲ್ಲಾ ಭಾರತೀಯರಿಗೆ ಸ್ಫೂರ್ತಿದಾಯಕ ದಿನವಾಗಿದೆ. ಮೊಘಲ್ ಪಡೆಯಿಂದ ಕೇವಲ ತಮ್ಮ 9ನೇ ವಯಸ್ಸಿನಲ್ಲಿ ಹುತಾತ್ಮರಾದ ಸಿಖ್ ಗುರುಗಳ ಪುತ್ರರಾದ ‘ಸಾಹಿಬ್‌ಜಾದಾ’ ಅವರಿಗೆ ಗೌರವ ಸಲ್ಲಿಸಲು ಡಿ.26 ರನ್ನು ‘ವೀರ್ ಬಾಲ್ ದಿವಸ್’ ಎಂದು ಘೋಷಿಸುವ ಮೂಲಕ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಹೆಮ್ಮಯ ಮಕ್ಕಳ ಧೈರ್ಯ ಮತ್ತು ತ್ಯಾಗವನ್ನು ದೇಶವ್ಯಾಪ್ತಿ ಪಸರಿಸುವಂತೆ ಮಾಡಿದ್ದಾರೆ. ಧರ್ಮರಕ್ಷಣೆಗಾಗಿ ಬಲಿದಾನ ಮಾಡಿ ಅಮರರಾದ ಸಾಹಿಬ್‌ಜಾದಾಗಳ ಧೈರ್ಯ ಮತ್ತು ತ್ಯಾಗ ಭವಿಷ್ಯದ ಪೀಳಿಗೆಗೆ ಎಂದೆಂದಿಗೂ ಸ್ಫೂರ್ತಿ ಎಂದು ಹೇಳಿದರು.
ಗುರುದ್ವಾರ ಭೇಟಿ ನೀಡಿದ ಸಂಸದರನ್ನು ಸಿಖ್ ಸಮುದಾಯವು ಸ್ವಾಗತಿಸಿ, ವೀರ್ ಬಾಲಕರ ಬಲಿದಾನವನ್ನು ಸ್ಮರಿಸಲು ನೀಡಿದ ಸಹಕರಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿತು.