
ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆ
‘ಸಮತೆಯ ಹಾದಿಯಲ್ಲಿ ಮಮತೆಯ ಆಧಾರದ ಮೇಲೆ ಸುಂದರ ಸಮಾಜ ಕಟ್ಟೋಣ’: ಮಿಥುನ್ ಎಚ್.ಎನ್.
ಮಂಗಳೂರು: ಸಮತೆಯ ಹಾದಿಯಲ್ಲಿ ಮಮತೆಯ ಆಧಾರದ ಮೇಲೆ ಸುಂದರ ಸಮಾಜ ಕಟ್ಟೋಣ ಎಂದು ಕರ್ನಾಟಕ ಕೋಸ್ಟಲ್ ಸೆಕ್ಯುರಿಟಿ ಪೋಲಿಸ್ ವಿಭಾಗದ ಎಸ್‌ಪಿ ಮಿಥುನ್ ಎಚ್.ಎನ್. ಹೇಳಿದರು.
ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ 39ನೇ ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆಯಂಗವಾಗಿ ವಳಚ್ಚಿಲ್ ಕ್ಯಾಂಪಸ್ಸಿನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶ್ರಮ ಏವ ಜಯತೆಯಿಂದ ಸತ್ಯಮೇವ ಜಯತೆಯ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ಇದಕ್ಕೆ ಎಕ್ಸ್‌ಪರ್ಟ್ ಶಿಕ್ಷಣವೇ ಪ್ರೇರಕ ಶಕ್ತಿ. ದಿನಪತ್ರಿಕೆ ಮರುದಿನ ಸಿಗುತ್ತಿದ್ದ ಗ್ರಾಮದಿಂದ ಎಕ್ಸ್‌ಪರ್ಟ್ ಕಾಲೇಜಿನ ಬಗ್ಗೆ ಮಾಹಿತಿ ತಿಳಿದೆ. ಕುತೂಹಲ ಮತ್ತು ಆಸಕ್ತಿಯಿಂದ ಮಂಗಳೂರಿಗೆ ಬಂದು ಶಿಸ್ತುಬದ್ಧ ಓದನ್ನು ಮೈಗೂಡಿಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಸನ್ನು ಸಾಕಾರಗೊಳಿಸಿದೆ. ಸಂಸ್ಥೆಯನ್ನು ಕಟ್ಟಿದ ಪ್ರೊ.ನರೇಂದ್ರ ನಾಯಕರ ಕಾರ‍್ಯಕ್ಷಮತೆ, ವೃತ್ತಿಬದ್ಧತೆ, ಕಾಲೇಜಿನ ಶಿಸ್ತು ತಮ್ಮ ಭವಿಷ್ಯವನ್ನು ರೂಪಿಸಿತು ಎಂದು ನೆನೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಎಕ್ಸ್‌ಪರ್ಟ್ ದಿನಾಚರಣೆಯ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸಮಾಜಕ್ಕೆ ಭರವಸೆಯ ಆಶಾಕಿರಣಗಳು. ಶೈಕ್ಷಣಿಕ ಪ್ರಯತ್ನ ಮತ್ತು ಕಠಿಣ ಪರಿರ್ಶರಮ ವಿದ್ಯಾರ್ಥಿಗಳ ಮತ್ತು ಶಿಕ್ಷಣ ಸಂಸ್ಥೆಯ ಭವಿಷ್ಯವನ್ನು ರೂಪಿಸುತ್ತದೆ ಎಂದವರು ತಿಳಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ಉಪಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ, ಕಾರ್ಯಕ್ರಮ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಿರಿಯ ನ್ಯಾಯವಾದಿ ಎ.ಅಮೃತ್ ಕಿಣಿ ಬಹುಮಾನ ವಿತರಿಸಿದರು. ನೇಹಲ್ ಆರ್. ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.