
ಕಳಪೆ ಪೀಠೋಪಕರಣ ವಿತರಣೆ: ದಂಡ
Wednesday, December 4, 2024
ಮಂಗಳೂರು: ಕಳಪೆ ಮಟ್ಟದ ಪೀಠೋಪಕರಣ ತಯಾರಿಸಿ ಕೊಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಸಮೀಪದ ಕಲ್ಲಂಗಲದ ಪ್ರೀತಿ ಫರ್ನಿಚರ್ ಮಾಲಕ ಸಂಜಯ್ ಕುಮಾರ್‌ಗೆ 20,000 ರೂ. ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.
ಕಲ್ಲಂಗಳ ನಿವಾಸಿ ಹೈದರ್ ಅಲಿ 50,000 ರೂ. ಮುಂಗಡ ನೀಡಿ ಉತ್ತಮ ಗುಣಮಟ್ಟದ ತೇಗದ ಮರದಿಂದ ಮನೆಗೆ ಪೀಠೋಪಕರಣವನ್ನು ತಯಾರಿಸಲು ಸೂಚಿಸಿದ್ದರು. ನಿಗದಿತ ಸಮಯಕ್ಕೆ ಪೀಠೋಪರಕಣ ತಯಾರಿಸದೆ ಕಳಪೆ ಗುಣಮಟ್ಟದ ಪೀಠೋಪಕರಣಗಳನ್ನು ಪೂರೈಸಿದ ಬಗ್ಗೆ ಹೈದರ್ ಅಲಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ ನ್ಯಾಯಾಲಯವು ವಿಚಾರಣೆಯನ್ನು ನಡೆಸಿ ಮುಂಗಡ ಪಡೆದ ಹಣವನ್ನು ಗ್ರಾಹಕನಿಗೆ ಹಿಂದಿರುಗಿಸಿ ಪೀಠೋಪಕರಣವನ್ನು ಮರಳಿ ಪಡೆಯಲು ಮತ್ತು ನಷ್ಟ ಹಾಗೂ ದಾವೆ ಖರ್ಚು ಸೇರಿಸಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಹೈದರ್ ಅಲಿ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.