
ಪ್ರತಿರೋಧ ತೋರುವ ಬರಹಗಾರರನ್ನು ಗುಂಡಿಕ್ಕಿ ಕೊಲ್ಲುವುದು ಮಾಮೂಲಿನ ಸಂಗತಿ: ಡಾ. ಮೀನಾ ಕಂದಸಾಮಿ
ಮಂಗಳೂರು: ಸಮಾಜದಲ್ಲಿ ತಮ್ಮ ಬರವಣಿಗೆ, ಚಿಂತನೆಯ ಮೂಲಕ ಪ್ರತಿರೋಧ ತೋರುವ ಬರಹಗಾರರನ್ನು, ಪ್ರಗತಿಪರರನ್ನು ಗುಂಡಿಕ್ಕಿ ಕೊಲ್ಲುವುದು ಮಾಮೂಲಿನ ಸಂಗತಿಯಾಗಿರುವುದು ಖೇದಕರ ಎಂದು ಕವಯಿತ್ರಿ, ಬರಹಗಾರ್ತಿ ಡಾ. ಮೀನಾ ಕಂದಸಾಮಿ ಅಭಿಪ್ರಾಯಿಸಿದ್ದಾರೆ.
ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಪಿ.ಪಿ. ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಕರ್ನಾಟಕ ತಿಯಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಲಾದ ಪಿ.ಪಿ. ಗೋಮತಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಸಾಹಿತಿ ಎಂ.ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ತಮ್ಮ ಬರಹಗಳು, ಮಾತಿನ ಮೂಲಕ ವೈಚಾರಿಕ ಪ್ರತಿರೋಧಗಳನ್ನು ಒಡ್ಡುವವರನ್ನು ಈ ರೀತಿಯಾಗಿ ಹತ್ಯೆ ಮಾಡುವಂತಹ ಕ್ರಿಯೆಗಳು ಯಾವುದೇ ಭಕ್ತಿ ಪಂಥದ ಕಾಲದಲ್ಲಿ ನಡೆಯುತ್ತಿರುವುದಲ್ಲ. ಇದು ನಮ್ಮ ಅವಧಿಯಲ್ಲಿ ನಡೆಯುತ್ತಿದೆ. ಅದರಲ್ಲಿಯೂ ಪ್ರಗತಿಪರ ರಾಜ್ಯಗಳಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದಂತಹ ರಾಜ್ಯಗಳಲ್ಲಿ ಈ ರೀತಿಯ ಮನಸ್ಥಿತಿಯನ್ನು ನೋಡುವಾಗ ಜನ ತಮಗಿಷ್ಟವಿಲ್ಲದ್ದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದು ಸ್ಪಷ್ಟಪಡಿಸುತ್ತದೆ ಎಂದವರು ಹೇಳಿದರು.
ದೇಶದಲ್ಲಿ ವಿಪಕ್ಷಗಳನ್ನು ಮಣಿಸುವ ನಿಟ್ಟಿನಲ್ಲಿ ಇಡಿ, ಸಿಬಿಐ ಮೂಲಕ ಕೇಂದ್ರ ಸರಕಾರ ಮಾಡುತ್ತಿದ್ದರೆ, ಇಂತಹ ಸಾಮಾಜಿಕವಾಗಿ ಪ್ರತಿರೋಧ ಒಡ್ಡುವವರನ್ನು ನಗರ ನಕ್ಸಲರೆಂಬ ಹಣೆಪಟ್ಟಿಯ ಮೂಲಕವೂ ಹಣಿಯಲಾಗುತ್ತದೆ. ಬರಹಗಾರರನ್ನು, ಪತ್ರಕರ್ತರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟುವ ಕಾರ್ಯ ಮಾಡಲಾಗುತ್ತಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಇಂತಹ ಪ್ರಕ್ರಿಯೆಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದವರು ವಿಶ್ಲೇಷಿಸಿದರು.
ಸಭಿಕರ ಜತೆಗಿನ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ. ಮೀನಾ ಕಂದಸಾಮಿ, ನನ್ನ ಅಮ್ಮ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದವರು. ಆ ಸಮಯದಲ್ಲೇ ಸುಮಾರು 20 ವರ್ಷಗಳ ಕಾಲ ಮಂಡಲ ಕಮಿಷನ್ನಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಿದವರು. ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ಐಐಟಿಗಳಲ್ಲಿ ಶೇ. 85ರಷ್ಟು ಭಾಗ ಮೇಲ್ವರ್ಗದ ಪ್ರಾಬಲ್ಯದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ. ಕಳೆದ 20 ವರ್ಷಗಳಿಂದಲೂ ಈ ಸಮಸ್ಯೆ ಕಾಡುತ್ತಿದೆಯಾದರೂ ಇದೀಗ ಈ ಬಗ್ಗೆ ರಾಜಕೀಯವಾಗಿ ಪ್ರತಿರೋಧ ವ್ಯಕ್ತವಾಗಿರುವುದು ಆಶಾದಾಯಕ ಎಂದವರು ಹೇಳಿದರು.
ಅಲೋಶಿಯಸ್ ಪದವಿ ಪಠ್ಯದಲ್ಲಿ ಡಾ. ಮೀನಾ ಕಂದಸಾಮಿ ಕವನ
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಪದವಿ ಪಠ್ಯದಲ್ಲಿ ಡಾ. ಮೀನಾ ಕಂದಸಾಮಿ ಅವರ ಕವನವನ್ನು ಸೇರ್ಪಡೆಗೊಳಿಸಿರುವ ಬಗ್ಗೆ ಕಾಲೇಜಿನ ಪ್ರಾಧ್ಯಾಪಕ ಡಾ. ರತನ್ ಮಾಹಿತಿ ನೀಡಿದರು.
ಪತ್ರಕರ್ತೆ ಡಾ. ಸಿಂಧು ಮಂಜೇಶ್ ಉಪಸ್ಥಿತರಿದ್ದರು.
ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ತಿಯಲಾಜಿಕಲ್ ರಿಸರ್ಚ್ ಇನ್ಸಿಟ್ಯೂಟ್‌ನ ನಿರ್ದೇಶಕ ಕ್ರಿಸ್ಟೋಫರ್ ಜಾರ್ಜ್ ವಂದಿಸಿದರು.