
ಪೊಲೀಸ್ ಕಮೀಷನರ್ ಇನ್ನು ಯಾರಿರಬೇಕೆಂದು ನಾವು ತೀರ್ಮಾನಿಸುತ್ತೇವೆ: ಸಂತೋಷ್ ಬಜಾಲ್
ಮಂಗಳೂರು: ನಗರದಲ್ಲಿ ಜನಪರವಾಗಿ ನಡೆಯಬೇಕಾಗುವ ಹೋರಾಟಗಳು ಎಲ್ಲಿ ಹೇಗೆ ನಡೆಯಬೇಕು ಬೇಡ ಎಂದು ಕಾನೂನಿಗೆ ವಿರುದ್ಧವಾಗಿ ವಿನಾಕಾರಣ ಕೇಸು ದಾಖಲಿಸುವ ಮೂಲಕ ನಿರ್ಬಂಧಿಸಿ ನೀವು ಸರ್ವಾಧಿಕಾರಿಯಾಗಿ ವರ್ತಿಸುವುದಾದರೆ ಇನ್ನು ಈ ನಗರಕ್ಕೆ ಪೊಲೀಸ್ ಕಮೀಷನರ್ ಯಾರಿರಬೇಕೆಂದು ನಾವು ತೀರ್ಮಾನಿಸುತ್ತೇವೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಅವರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲರ ವರ್ಗಾವಣೆಗೆ ಒತ್ತಾಯಿಸಿ ಇಂದು ಡಿವೈಎಫ್‌ಐ, ಸಿಪಿಐಎಂ ಬೆಂಗರೆ ಗ್ರಾಮ ಸಮಿತಿ ನೇತೃತ್ವದಲ್ಲಿ ಕಸಬ ಬೆಂಗರೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕಮೀಷನರ್ ಅಗ್ರವಾಲ್ ಜನಪರ ಹೋರಾಟಗಳನ್ನು ನಿಯಂತ್ರಿಸುವುದು ಇದೇ ಮೊದಲಲ್ಲ ಈ ಹಿಂದೆಯೂ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಡಿವೈಎಫ್‌ಐ ನಡೆಸಿದ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಕೇಸು ದಾಖಲಿಸಿದ ಹಿನ್ನಲೆ ಇದೆ. ಕಮೀಷನರ್‌ಗೆ ಗೊತ್ತಿರಬೇಕು ಡಿವೈಎಫ್‌ಐ ಮತ್ತು ಕಮ್ಯೂನಿಷ್ಟರ ವಿರುದ್ಧ ಕೇಸು ದಾಖಲಿಸಿದರೆ ನಾವು ಹೆದರಿ ಕೂರುವವರಲ್ಲ. ಜಿಲ್ಲೆಯಲ್ಲಿ ಮತೀಯ ಸಂಘಟನೆಗೆ ಆರ್‌ಎಸ್‌ಎಸ್ ನಡೆಸಿದ ಹಿಂಸಾಚಾರದ ವಿರುದ್ದವಾಗಿ ಕೋಮುಸೌಹಾರ್ಧತೆಯ ಉಳಿವಿಗಾಗಿ ಅವರ ಕತ್ತಿ ತಲವಾರಿಗೆ ಪ್ರಾಣವನ್ನೇ ಮುಡಿಪಾಗಿಟ್ಟ ಸಂಘಟನೆ ಇದ್ದರೆ ಅದು ಡಿವೈಎಫ್‌ಐ ಎಂದು, ಇದು ನಿಮ್ಮ ಪೊಲೀಸ್ ಇಲಾಖೆಯ ಪುಟಗಳಲ್ಲಿ ದಾಖಲಾಗಿದೆ. ಇನ್ನು ನಿಮ್ಮ ಪೊಲೀಸ್ ಕೇಸುಗಳಿಗೆ ಹೆದರಿ ಕೂರಲಿರುವವರು ನಾವೇ? ಎಂದು ಸವಾಲೆಸೆದರು.
ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಈ ಕೂಡಲೇ ಕಮೀಷನರ್ ಅಗ್ರವಾಲರನ್ನು ವರ್ಗಾವಣೆ ಮಾಡಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ನಮ್ಮ ಹೋರಾಟ ಪೊಲೀಸರ ವಿರುದ್ಧ ಅಲ್ಲ ಜನವಿರೋಧಿ, ಸಂವಿಧಾನ ವಿರೋಧಿ ಪೊಲೀಸ್ ಕಮೀಷನರ್ ಅಗ್ರವಾಲರ ವಿರುದ್ಧ. ಕಮೀಷನರ್ ಅಗ್ರವಾಲ್ ಮಂಗಳೂರು ನಗರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ. ನಗರದೆಲ್ಲೆಡೆ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿರುವುದ ಹಿಂದೆ ಯಾರಿದ್ದಾರೆಂಬುದು ನಮಗೆ ಗೊತ್ತಿದೆ ಎಲ್ಲವನ್ನೂ ಬಯಲುಮಾಡಲಿದ್ದೇವೆ. ಯು.ಟಿ. ಖಾದರ್ ಅವರೇ ಸಂವಿಧಾನಿಕ ಹುದ್ದೆಯಲ್ಲಿ ಕೂತು ಕೀಳುಮಟ್ಟದ ರಾಜಕಾರಣಕ್ಕೆ ಇಳಿಯಬೇಡಿ ನೀವು ಡೆಂಜರ್ ಝೋನಿನತ್ತ ತೆರಳಿಯಾಗಿದೆ ಗೊತ್ತಿರಲಿ. ಈ ರೀತಿಯ ನಡವಳಿಕೆಯಿಂದ ಜನ ಬೇಸತ್ತಿದ್ದಾರೆ ಇನ್ನು ನಿಮ್ಮನ್ನು ಶಾಶ್ವತವಾಗಿ ಮನೆಕಡೆಗೆ ಕಳುಹಿಸಲು ಜನ ತೀರ್ಮಾನಿಸುವ ಮೊದಲು ಎಚ್ಚೆತ್ತುಕೊಳ್ಳಿ ಜನಪರವಾಗಿ ನಡೆದುಕೊಳ್ಳಿ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿ ಮುಖಂಡರಾದ ಸಿಪಿಐಎಂ ಬೆಂಗರೆ ಶಾಖೆಯ ಕಾರ್ಯದರ್ಶಿಗಳಾದ ಬಿಲಾಲ್, ನಾಸಿರ್ ಬಾಸ್, ಡಿವೈಎಫ್‌ಐ ಮುಖಂಡರಾದ ಹನೀಫ್ ಬೆಂಗರೆ, ಮುಹಾಝ್, ಜಂಶೀರ್, ಯೆಯ್ಯಾ, ರಫೀಕ್ ಪಿ.ಜಿ., ರಿಜ್ವಾನ್, ಶಾಹಿಲ್, ಶಾಫಿಲ್ ವಹಿಸಿದ್ದರು.
ಪ್ರತಿಭಟನೆ ವೇಳೆ ಋಣಮುಕ್ತ ಹೋರಾಟ ಸಮಿತಿಯ ಝ್ವಾಹರ, ಜಮೀಲ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಕಬೀರ್, ನಾಫಿಲ್, ಅಸ್ಫಾನ್, ಯೋಗಿತಾ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿ ಕಾರ್ಯದರ್ಶಿ ತಯ್ಯೂಬ್ ಬೆಂಗರೆ ಸ್ವಾಗತಿಸಿ, ನಿರೂಪಿಸಿದರು. ಸಿಪಿಐಎಂ ಮುಖಂಡ ಎ.ಬಿ. ನೌಶದ್ ವಂದಿಸಿದರು.