ಜನಾಕರ್ಷಣೆಯ ಕರಾವಳಿ ಉತ್ಸವ: ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ

ಜನಾಕರ್ಷಣೆಯ ಕರಾವಳಿ ಉತ್ಸವ: ಸ್ಪೀಕರ್, ಉಸ್ತುವಾರಿ ಸಚಿವರ ಸೂಚನೆ


ಮಂಗಳೂರು: ಈ ವರ್ಷ ನಡೆಯಲಿರುವ ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿ ಮಾಡಲು ಹೆಚ್ಚು ಒತ್ತು ನೀಡುವಂತೆ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಸೋಮವಾರ ಕರಾವಳಿ ಉತ್ಸವ ಸಿದ್ಧತೆಗಳ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಿಂದ ವಿಡಿಯೋ ಕಾನ್ಪೆರನ್ಸ್ ಮೂಲಕ ಭಾಗವಹಿಸಿ ಮಾತನಾಡಿದರು.

ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾಪ್ರಕಾರಗಳು ಸೇರಿದಂತೆ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ವಿವಿಧ ಭಾಷಾ ಅಕಾಡೆಮಿಗಳ ಸಂಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸ್ಪೀಕರ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹಲವು ವರ್ಷಗಳ ಬಳಿಕ ಕರಾವಳಿ ಉತ್ಸವ ನಡೆಯುತ್ತಿರುವುದರಿಂದ ವಿವಿಧ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಕರ್ಷಣೀಯ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕರಾವಳಿ ಉತ್ಸವ ನಡೆಸಲು ಅಗತ್ಯ ಸಂಪನ್ಮೂಲಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಲು ಪ್ರಯತ್ನಿಸಬೇಕು. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಲು ಗಮನಹರಿಸುವುದಾಗಿ ತಿಳಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕರಾವಳಿ ಉತ್ಸವದೊಂದಿಗೆ ಪರಿಸರ ಮತ್ತು ಪ್ರಕೃತಿ ಸ್ನೇಹಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಸಸ್ಯಮೇಳ ಆಯೋಜಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಮಾತನಾಡಿ, ಡಿಸೆಂಬರ್ 21ರಿಂದ ಕರಾವಳಿ ಉತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ 21ರಿಂದ ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನ ನಡೆಯಲಿದೆ. ಡಿಸೆಂಬರ್ 28-29ರಂದು ಪಣಂಬೂರಿನಲ್ಲಿ ಬೀಚ್ ಉತ್ಸವ, ಜನವರಿ 4-5 ರಂದು ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ, ಆಯೋಜಿಸಲಾಗಿದೆ ಜನವರಿ 18-19ರಂದು ಗಾಳಿಪಟ ಉತ್ಸವ ನಡೆಯಲಿದೆ ಎಂದು ತಿಳಿಸಿದರು.

ಹರೇಕಳದಲ್ಲಿ ನದಿ ಉತ್ಸವ ಕಾರ್ಯಕ್ರಮ ನಡೆಯಲಿದೆ ತುಳು, ಬ್ಯಾರಿ ಕೊಂಕಣಿ ಅಕಾಡೆಮಿಗಳ ಸಂಯೋಗದಲ್ಲಿ ಸಾಂಸ್ಕೃತಿಕ ಪ್ರದರ್ಶನ ಮತ್ತು ಕಾರ್ಯಕ್ರಮ ನಡೆಸಲು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಮೂಡಾ ಆಯುಕ್ತ ನೂರ‍್ಜಹಾನ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article