
ವಿಜೃಂಭಣೆಯಿಂದ ಜರುಗಿದ ಎಸ್.ಡಿ.ಎಂ. ಕಾನೂನು ಕಾಲೇಜಿನ ಸುವರ್ಣ ಪಥ
ಎಸ್.ಡಿ.ಎಂ. ಕಾನೂನು ಕಾಲೇಜು ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ: ಭಾರತದ ಅಟಾರ್ನಿ ಜನರಲ್ ಡಾ. ವೆಂಕಟ್ ರಮಣಿ
ಮಂಗಳೂರು: ಎಸ್.ಡಿ.ಎಂ. ಕಾನೂನು ಕಾಲೇಜಿನ 50 ವರ್ಷಗಳ ಆಚರಣೆಯ ಭಾಗವಾಗಿರುವುದು ಸಂತಸ ತಂದಿದೆ ಅಚಲ ವಿಶ್ವಾಸದಿಂದ, ಈ ಸಂಸ್ಥೆಯು ಒಂದು ಶತಮಾನವನ್ನು ಮೀರಿ ಬೆಳೆದಿದೆ, ಅಭಿವೃದ್ಧಿ ಹೊಂದಿದೆ. ಸುವರ್ಣ ಪಥ ಕಾರ್ಯಕ್ರಮ ಕಾನೂನು ಶಿಕ್ಷಣದ ವಿಕಸನಕ್ಕೆ ಹಿಡಿದ ಕೈಗನ್ನಡಿ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸುವುದಾಗಿ ಭಾರತದ ಅಟಾರ್ನಿ ಜನರಲ್ ಡಾ. ವೆಂಕಟ್ ರಮಣಿ ಹೇಳಿದರು.
ಅವರು ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ನಗರದ ಟಿ. ಎಂ.ಎ.ಪೈ. ಸಭಾಂಗಣದಲ್ಲಿ ಪೂರ್ವ ವಿದ್ಯಾರ್ಥಿ ಪುನರ್ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಏಷ್ಯಾದಲ್ಲಿ ಕಾನೂನು ಶಿಕ್ಷಣ ಗಮನಾರ್ಹವಾಗಿ ಬೆಳೆದಿದೆ. ಕಾನೂನು ಶಿಕ್ಷಣದ ವಿಕಸನದಲ್ಲಿ ಹೆಗ್ಗಡೆಯವರ ಪಾತ್ರ ಮಹತ್ತರವಾದದ್ದು. ಪೂಜ್ಯ ಹೆಗ್ಗಡೆಯವರ ದೂರದೃಷ್ಟಿತ್ವದಿಂದ ಸಾಮಾನ್ಯರಿಗೂ ಕಾನೂನು ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ. ಎಸ್.ಡಿ.ಎಂ. ಸಂಸ್ಥೆಯ ಗುಣಮಟ್ಟದ ಶಿಕ್ಷಣದಿಂದ ಅಸಂಖ್ಯಾತ ವಿದ್ಯಾರ್ಥಿಗಳು ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಅನೇಕರನ್ನು ಪ್ರೇರೇಪಿಸುತ್ತಿದೆ ಎಂದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಪಠ್ಯ ಪುಸ್ತಕಗಳ ಕಲಿಕೆಯ ಜೊತೆಗೆ ಕ್ರೀಡೆ ಸೃಜನಾತ್ಮಕ ಕಲಿಕೆಗೂ ಒತ್ತುನಿಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಹುದಾದ ವಿಧಾರ್ಥಿಗಳನ್ನು ರೂಪಿಸುತ್ತಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಒಂದು ಕಾಲದಲ್ಲಿ ಕಡಿಮೆ ಕಿಮ್ಮತ್ತು ಹೊಂದಿದ್ದ ವಕೀಲ ವೃತ್ತಿ ಇಂದು ಅತ್ಯಂತ ಗೌರವಾನ್ವಿತ ಹುದ್ದೆಗಳಲ್ಲಿ ಒಂದಾಗಿದೆ ಎಂದ ಅವರು ಎಸ್ ಡಿ ಎಂ ಕಾನೂನು ಕಾಲೇಜು ಆರಂಭಿಸಿದ ದಿನಗಳನ್ನು ಮೆಲಕುಹಾಕುತ್ತಾ, ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹೆಚ್ಚಿದ್ದ ಸಂದರ್ಭದಲ್ಲಿ ಕಾನೂನು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತು ಕಾನೂನು ಕಾಲೇಜು ಆರಂಭಿಸಿ ಇದೀಗ ಕಾಲೇಜು ಯಶಸ್ವಿ ಐವತ್ತು ವರ್ಷ ಪೂರೈಸಿದೆ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೆಲ್ಲ ಒಳ್ಳೆಯ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾಹುಲ್ ಹಮೀದ್ ರಹಮಾನ್, ಕೇರಳದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆಂಟೋನಿ ಡೊಮಿನಿಕ್, ಕರ್ನಾಟಕ ಹೈಕೋರ್ಟ್ (ನಿ) ಮೈಕೆಲ್ ಡಿ'ಕುನ್ಹಾ , ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್, ಸಿಂಬಯಾಸಿಸ್ ಕಾನೂನುಫ್ ಶಾಲೆ ನಿರ್ದೇಶಕಿ ಡಾ. ಶಶಿಕಲಾ ಗುರುಪುರ್ ಸೇರಿದಂತೆ ಪ್ರಮುಖ ಗಣ್ಯರು ಕಾನೂನು ದಿಗ್ಗಜರು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.