
ಕಮ್ಯುನಿಸ್ಟರು ಹೋರಾಟದಿಂದ ನಿರ್ಗಮಿಸುವವರಲ್ಲ: ಡಾ. ಜಿ.ರಾಮಕೃಷ್ಣ
ಮಂಗಳೂರು: ಭಾರತೀಯ ಕಮ್ಯುನಿಸ್ಟ್ ಪಕ್ಷ ಸಿಪಿಐ ಗುಣಾತ್ಮಕವಾಗಿ ಸಮಾಜದ ಬದಲಾವಣೆಗೆ ಕಂಕಣ ಬದ್ಧರಾಗಿರುವ ಪಕ್ಷ. ಕಮ್ಯುನಿಸ್ಟರು ಇವತ್ತು ಏನಾದರೂ ಆಗಿಲ್ಲವೆಂದರೆ ಹೋರಾಟದಿಂದ ನಿರ್ಗಮಿಸುವವರಲ್ಲ . ಸಿಪಿಐ ಸೋತು ಓಡಿಹೋಗುವ ಪಕ್ಷವಲ್ಲ ಎಂದು ಖ್ಯಾತ ಶಿಕ್ಷಣ ತಜ್ಞ , ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ರಾಮಕೃಷ್ಣ ಬೆಂಗಳೂರು ಅವರು ಹೇಳಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಗರದ ಡಾನ್ ಬಾಸ್ಕೊ ಹಾಲ್‌ನಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಕ್ಷಕ್ಕೆ ಶತಮನೋತ್ಸವದ ಸಂಭ್ರಮಾಚರಣೆಯು ಚಾರಿತ್ರಿಕವಾಗಿ ಪ್ರಮುಖ ಘಟ್ಟ. ನಡೆದು ಹಾದಿಯನ್ನು ಮೆಲುಕು ಹಾಕುವ ಸಂದರ್ಭ ವಾಗಿದ್ದು, ಹೀಗಾಗಿ ನೂರು ವರ್ಷಗಳ ಅವಧಿಯಲ್ಲಿ ಇಡೀ ದೇಶದಲ್ಲಿ ಮಾಡಿದ್ದನ್ನು ಪರಾಮರ್ಶೆ ಮಾಡಲು ಹೊರಟಿದ್ದೇವೆ ಎಂದರು.
ರಾಜ್ಯ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ಕರ್ನಾಟಕದಲ್ಲಿ ಮೊದಲು ಕಮ್ಯುನಿಸ್ಟ್ ಪಕ್ಷ ಕಟ್ಟಿದ್ದು ಉಳ್ಳಾಲದಲ್ಲಿ. ಅಂತಹ ಉಳ್ಳಾಲಕ್ಕೆ ನಿನ್ನೆ ಬಂದಾಗ ರೋಮಾಂಚನವಾಯಿತು ಎಂದು ಬಣ್ಣಿಸಿದರು.
ಹಿಂದೆ ಈಸ್ಟ್ ಇಂಡಿಯಾ ಕಂಪೆನಿ ಮಾಡಿದಂತೆ ಕಾರ್ಪೊರೇಟ್ ಕಂಪೆನಿಗಳು ಜನರನ್ನು ಶೋಷಣೆ ಮಾಡುತ್ತಿದೆ. ಊಳಿಗಮಾನ ವ್ಯವಸ್ಥೆ ಯಂತೆ ಬಂಡವಾಳ ಶಾಹಿಗಳು ಇವತ್ತು ವಿಜ್ರಂಭಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಗೆ ಮೊದಲ ಶತ್ರು ಕಮ್ಯುನಿಸ್ಟ್ ಆಗಿದೆ. ದೇಶದಲ್ಲಿ ಬಿಜೆಪಿ ಆರ್‌ಎಸ್‌ಎಸ್ ನ್ನು ನಿರ್ಮೂಲನೆ ಮಾಡಲು ನಾವು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಮಂಗಳೂರು ಸಮಿತಿ ಅಧ್ಯಕ್ಷ ನಾಗೇಶ್ ಕಲ್ಲೂರು ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯ ಮಂಗಳೂರು ಸಮಿತಿ ಗೌರವಾಧ್ಯಕ್ಷ ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಶತಮಾನೋತ್ಸವ ಆಚರಣೆ ಮಂಗಳೂರಿನಲ್ಲಿ ನಡೆಯುವುದಕ್ಕೆ ಹೆಮ್ಮೆ ಇದೆ. ೧೯೫೧ರಲ್ಲಿ ಉಳ್ಳಾಲದಲ್ಲಿ ಸಿಪಿಐ ಮೊದಲ ಸಮ್ಮೇಳನ ನಡೆದು ಕರ್ನಾಟಕಕ್ಕೆ ಅದರ ಚಟುವಟಿಕೆ ವಿಸ್ತರಣೆಗೊಂಡಿತು. ಮಂಗಳೂರಿನ ಎಸ್ ವಿ ಘಾಟೆ ಸಿಪಿಐ ಪ್ರಥಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಪಿಐ ಪಕ್ಷವನ್ನು ಕಟ್ಟಿ ಬೆಳೆಸಿದರು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಿಪಿಐ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.
ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಕರುಣಾಕರ ಮಾರಿಪಳ್ಳ, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್ ವಿ ರಾವ್ , ಸಿಪಿಐ ಕರ್ನಾಟಕ ರಾಜ್ಯ ಮಂಡಳಿಯ ಸದಸ್ಯ ವಿ.ಕುಕ್ಯಾನ್ ಸಿಪಿಐ ಪ್ರಮುಖರಾದ ಶಶಿಕಲಾ ಉಡುಪಿ, ಡಾ.ಎನ್.ಗಾಯತ್ರಿ, ಬಾಬು ಭಂಡಾರಿ ಬಂಟ್ವಾಳ, ಚಂದ್ರಾವತಿ ಜೈನ್, ಕುಸುಮಾ ವಿಶ್ವನಾಥ, ಲೀನಾ ಪಿಂಟೊ,ನಫೀಸಾ ವಿಟ್ಲ, ಎ ಪ್ರಭಾಕರ್ ರಾವ್, ವಿಶು ಕುಮಾರ್ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ ವಂದಿಸಿದರು. ವಿ ಸೀತಾರಾಮ ಬೇವಿಂಜೆ ಕಾರ್ಯಕ್ರಮ ನಿರೂಪಿಸಿದರು.
ವಿಟ್ಲದ ರಿಫಾಯಿ ದಫ್ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಮಿನಿ ವಿಧಾನ ಸೌಧದ ಬಳಿಯಿಂದ ಡಾನ್ ಬೊಸ್ಕೊ ಸಭಾಂಗಣದ ತನಕ ಮೆರವಣಿಗೆ ನಡೆಯಿತು.