
ಡಿ.29 ರಂದು ಮೂಡುಬಿದಿರೆ ಯುವವಾಹಿನಿ ಘಟಕದಿಂದ 37ನೇ ವಾಷಿ೯ಕ ಸಮಾವೇಶ: ಸಾಧಕರಿಗೆ ಪ್ರಶಸ್ತಿ, ಪುರಸ್ಕಾರ
ಮೂಡುಬಿದಿರೆ: ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿರುವ ಯುವವಾಹಿನಿ (ರಿ.)ಕೇಂದ್ರ ಸಮಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ 37ನೇ ವಾರ್ಷಿಕ ಸಮಾವೇಶವು ಡಿ.29 ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಅವರು ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಾ ಬಂದಿರುವ ಯುವವಾಹಿನಿಯು ಅವಿಭಜಿತ ದ.ಕ,ಉಡುಪಿ ಜಿಲ್ಲೆ ಅಲ್ಲದೆ ಬೆಂಗಳೂರು ಸೇರಿ ಒಟ್ಟು 35 ಘಟಕಗಳನ್ನು, 4072 ಸಕ್ರೀಯ ಸದಸ್ಯರನ್ನು ಒಳಗೊಂಡಿದೆ.
ಪ್ರತಿವಷ೯ದಂತೆ ಈ ವಷ೯ವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸುತ್ತಿದ್ದು ಈ ಬಾರಿ ಯುವವಾಹಿನಿಯ ಪ್ರತಿಷ್ಠಿತ ‘ಸಾಧನಾ ಶ್ರೀ’ ಪ್ರಶಸ್ತಿಯನ್ನು ಈಬಾರಿ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರಿಗೆ ನೀಡಿ ಗೌರವಿಸಲಿದ್ದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ‘ಸಾಧನಾ ಶ್ರೇಷ್ಠ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ಸಂಗೀತ ಕ್ಷೇತ್ರದ ಸಾಧಕರಾದ ಸಚಿತ್ ಪೂಜಾರಿ ನಂದಳಿಕೆ,ಸಾಂಸ್ಕೃತಿಕ, ಜಾನಪದ ,ಸಂಶೋಧನೆ, ಸಂಘಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿನೇಶ್ ಸುವರ್ಣ ರಾಯಿ,ಕ್ರೀಡಾ ಕ್ಷೇತ್ರದ ಸಾಧಕರಾದ ರಕ್ಷಾ ರೆಂಜಾಳ,ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಕುಮಾರ್ ಪೂಜಾರಿ ಇರುವೈಲ್ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಆನಂದ ಬಂಗೇರ ಅವರಿಗೆ ‘ಯುವವಾಹಿನಿ ಗೌರವ ಅಭಿನಂದನೆ’, ಡಾ.ಶಿಲ್ಪಾ ದಿನೇಶ್ ಹಾಗೂ ಡಾ.ಉಷಾ ಅವರಿಗೆ ‘ಯುವವಾಹಿನಿ ಅಭಿನಂದನೆ’ ಮತ್ತು ಪ್ರಕೃತಿ ಮಾರೂರು ಅವರಿಗೆ ‘ಯುವವಾಹಿನಿ ಸಾಧಕ’ ಪುರಸ್ಕಾರ ನೀಡಿ ಗೌರವಿಸಲಾಗುವುದೆಂದವರು ಮಾಹಿತಿ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ.ಅವರು ಮಾತನಾಡಿ ‘ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಲಿದ್ದು ಬೆಂಗಳೂರು ನಗರ ಜಿಲ್ಲಾಧಿಕಾರಿಯವರಾದ ಜಿ.ಜಗದೀಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
‘ಯುವ ಸಿಂಚನ’ ವಾರ್ಷಿಕ ವಿಶೇಷಾಂಕವನ್ನು ಭಾರತ್ ಕೊ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ ಅವರು ಬಿಡುಗಡೆಗೊಳಿಸಲಿದ್ದಾರೆ.
ಬೆಂಗಳೂರು ಹೈಕೋರ್ಟ್ ನ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲ್ ತಾರಾನಾಥ ಪೂಜಾರಿ, ಮಂಗಳೂರು ವಿಕಾಸ ಕಾಲೇಜಿನ ಟ್ರಸ್ಟಿ ಸೂರಜ್ ಕುಮಾರ್ ಕಲ್ಯಾ,ಮೂಡುಬಿದಿರೆ ರತ್ನ ವುಮೆನ್ಸ್ ಕ್ಲಿನಿಕ್ ನ ಡಾ.ರಮೇಶ್,ಉದ್ಯಮಿ ದಿನೇಶ್ ಅಮೀನ್ ಕುಂದಾಪುರ, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಹಾಗೂ ಉಡುಪಿ ಕೋಟ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುನಿತಾ ವಿ.ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನದ ವೇಳೆಗೆ ಯುವವಾಹಿನಿ ಮೂಡುಬಿದಿರೆ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ನಡರಯಲಿದೆ ಎಂದು ತಿಳಿಸಿದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್, ನಿರ್ದೇಶಕರಾದ ಗಣೇಶ್ ವಿ. ಕೋಡಿಕಲ್, ಯುವವಾಹಿನಿ ಮೂಡುಬಿದಿರೆ ಘಟಕದ ನಿಯೋಜಿತ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಖಜಾಂಚಿ ಪ್ರತಿಭಾ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.