ಜ್ಯುವೆಲ್ಲರಿ ಅಂಗಡಿಯವರನ್ನು ಯಾಮಾರಿಸಲು ವಿಫಲ ಯತ್ನ
ಮುಲ್ಕಿ: ಕಿನ್ನಿಗೋಳಿ ಚರ್ಚ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಜುವೆಲ್ಲರಿ ಅಂಗಡಿಗೆ ಆಗಮಿಸಿದ ಮಹಿಳೆಯೋರ್ವರು ಅಂಗಡಿಯ ಮಾಲಕರಿಗೆ ಚಿನ್ನದ ಸರ ಖರೀದಿಸುವ ವ್ಯವಹಾರ ನಡೆಸಿ ಅಂಗಡಿಯವರನ್ನು ಯಾಮಾರಿಸಲು ಯತ್ನಿಸಿ ವಿಫಲರಾಗಿದ್ದಾರೆ
ಮುಕ್ಕ ಮೂಲದ ಮಹಿಳೆಯೊಬ್ಬರು ಕಿನ್ನಿಗೋಳಿ ಚರ್ಚ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಆಭರಣದ ಅಂಗಡಿಗೆ ಬಂದು ಚಿನ್ನದ ಸರ ಖರೀದಿಸಿ ಅದರ ಮೊತ್ತ 40,000 ರೂ. ಗೂಗಲ್ ಪೇ ಮಾಡುತ್ತೇನೆ ಎಂದು ಹೇಳಿದ್ದು , ಹಣ ಸಂದಾಯ ಮಾಡಿದ ಬಗ್ಗೆ ಅಂಗಡಿಯವರಿಗೆ ಮೊಬೈಲಲ್ಲಿ ತೋರಿಸಿದಾಗ ಅಂಗಡಿಯವರು ಅದನ್ನು ನಂಬಿದ್ದಾರೆ.
ಆದರೆ ಸುಮಾರು ಹೊತ್ತಾದರೂ ತಮ್ಮ ಅಕೌಂಟಿಗೆ ಹಣ ಬರದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅಂಗಡಿಯ ಮಾಲೀಕರು ಆತಂಕಗೊಂಡು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ತಾವು ವಂಚನೆಗೊಳಗಾದ ಬಗ್ಗೆ ತಿಳಿಸಿ ಕೂಡಲೇ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಿನ್ನಿಗೋಳಿ ಪೇಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಆಭರಣದ ಅಂಗಡಿ ಬಳಿ ಕರೆ ತಂದಿದ್ದಾರೆ.
ಬಳಿಕ ಅಂಗಡಿಯಲ್ಲಿ ಹಣ ಸಂದಾಯವಾಗದ ಬಗ್ಗೆಮಹಿಳೆ ತಪ್ಪೊಪ್ಪಿಕೊಂಡು ಆಭರಣ ವಾಪಸ್ ಕೊಟ್ಟಿದ್ದಾಳೆ. ಕೂಡಲೇ ಅಂಗಡಿಯವರು ಆಭರಣವನ್ನು ಪರಿಶೀಲಿಸಿದಾಗ ನಕಲಿ ಆಭರಣವನ್ನು ಕೊಟ್ಟ ಬಗ್ಗೆ ಮತ್ತೆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಬಳಿಕ ಮಹಿಳೆ ಅಸಲಿ ಆಭರಣವನ್ನು ವಾಪಸ್ ಕೊಟ್ಟಿದ್ದಾಳೆ.
ಈ ಸಂದರ್ಭ ಸ್ಥಳೀಯರು ಆಭರಣದ ಅಂಗಡಿಯವರಿಗೆ ಮೋಸ ಮಾಡಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮುಲ್ಕಿ ಪೊಲೀಸರು ಮಹಿಳೆಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೇಕ ವಂಚಕರು ಅಮಾಯಕರನ್ನು ಮೋಸಗೊಳಿಸುತ್ತಿದ್ದು ಅಂಗಡಿಯ ಮಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಥಳಿಯ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಹೇಳಿದ್ದಾರೆ.