ಕಾರು ಪಲ್ಟಿ: ಅಪಾಯದಿಂದ ಪಾರು
Thursday, December 12, 2024
ಪುತ್ತೂರು: ನಗರದ ತೆಂಕಿಲದ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಕಾರೊಂದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಗಾಯಗೊಂಡು ಪವಾಡಸದೃಶವಾಗಿ ಪಾರಾದ ಘಟನೆ ಬುಧವಾರ ಮಧ್ಯರಾತ್ರಿ ಸಂಭವಿಸಿದೆ.
ಮಂಗಳೂರಿನ ಪಿ.ಜಿ. ಒಂದರಲ್ಲಿ ವಾಸವಾಗಿರುವ ಬೆಳಾರಾಣಿ (49) ಮತ್ತು ಅವರ ಪುತ್ರಿ ಅಕ್ಷ ಎಲ್. ಪಟೇಲ್ ಎಂಬವರು ಗಾಯಗೊಂಡಿದ್ದಾರೆ.
ಬೆಳಾರಾಣಿ ಅವರು ತಮ್ಮ ಕಾರಿನಲ್ಲಿ ಪುತ್ರಿಯೊಂದಿಗೆ ಸಕಲೇಶಪುರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರು ಮಡಿಕೇರಿ ಮಾರ್ಗವಾಗಿ ಪುತ್ತೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದರು, ಬುಧವಾರ ಮಧ್ಯರಾತ್ರಿ ಬೆಳಾರಾಣಿ ಅವರ ನಿಯಂತ್ರಣ ಕಳೆದುಕೊಂಡ ಕಾರು ಹೆದ್ದಾರಿ ಪಕ್ಕದ ಅಲ್ಯುಮಿನಿಯಂ ತಡೆಬೇಲಿಗೆ ಢಿಕ್ಕಿಯಾಗಿ ಪಲ್ಟಿಯಾಗಿದೆ. ಚಾಲಕಿಗೆ ನಿದ್ದೆಯ ಮಂಪರು ಕಾಣಿಸಿಕೊಂಡ ಪರಿಣಾಮ ದುರ್ಘಟನೆ ಸಂಭವಿಸಿದೆ. ಕಾರು ಹೆದ್ದಾರಿ ಬಿಟ್ಟು ಪಕ್ಕದ ಜಾಗಕ್ಕೆ ಜಿಗಿದಿದು, ಅಲ್ಲಿ ತಲೆಕೆಳಗಾಗಿ ಬಿದ್ದಿದೆ.
ಬೆಳಾರಾಣಿ ಮತ್ತು ಅಕ್ಷ ಎಲ್. ಪಟೇಲ್ ಅವರು ತರಚಿದ ಗಾಯಗೊಂದಿಗೆ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ. ಪುತ್ತೂರು ಟ್ರಾಫಿಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.