ಹಾಡುಹಗಲೇ ಲಕ್ಷಾಂತರ ಚಿನ್ನಾಭರಣ ಕಳವು
Wednesday, December 18, 2024
ಪುತ್ತೂರು: ಹಾಡುಹಗಲು ಮನೆಯೊಂದರ ಹಿಂಬದಿಯ ಬಾಗಿಲುಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ.
ಆಲಂಕಾರು ಗ್ರಾಮದ ಕಲ್ಲೇರಿ ನಿವಾಸಿ ಸುಧಾಕರ ಪೂಜಾರಿ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಸುಮಾರು ರೂ.೪ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಆಲಂಕಾರು-ಶಾಂತಿಮೊಗರು ರಸ್ತೆಯ ಬದಿಯಲ್ಲಿ ಕಲ್ಲೇರಿ ಎಂಬಲ್ಲಿ ಅವರ ಮನೆಯಿದ್ದು, ಮಧ್ಯಾಹ್ನದ ಹೊತ್ತು ಸುಧಾಕರ ಪೂಜಾರಿ ಅವರು ಪೇಟೆಗೆ ತೆರಳಿದ್ದರು. ಅವರ ಪತ್ನಿ ಸೌಮ್ಯಲತಾ ಅವರು ತೋಟಕ್ಕೆ ಹೋಗಿದ್ದರು. ಈ ಸಂದರ್ಭ ಕಳ್ಳರು ಮನೆಯ ಹಿಂಭಾಗದಿಂದ ಮನೆಯೊಳಗೆ ಪ್ರವೇಶಿಸಿ ಈ ಕೃತ್ಯ ನಡೆದಿದ್ದಾರೆ. ಈ ಬಗ್ಗೆ ಕಡಬ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಿಲ ಬಳಿ ಹೆಜ್ಜೆ ಗುರುತು ಇದ್ದು, ಶ್ವಾನದಳ ಕರೆಸಿ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.