
ಕಚ್ಚಾರಸ್ತೆ ದುರಸ್ಥಿಗೆ ಮುಂದಾಗದ ಗ್ರಾಪಂ: ‘ನಮ್ಮರಸ್ತೆ ನಮ್ಮ ಆಸ್ತಿ’ ಯುವಕರಿಂದ ಮಾದರಿ ಕಾರ್ಯ
ಪುತ್ತೂರು: ಜನತೆಯ ಮೂಲಭೂತ ಅವಶ್ಯಕತೆಯಾಗಿರುವ ಗ್ರಾಮೀಣ ರಸ್ತೆಗಳ ಅವಸ್ಥೆ ತೀರಾ ಸಂಕಷ್ಟದ ಸ್ಥಿತಿ ತಲುಪಿದೆ. ಈ ರಸ್ತೆಗಳ ದುರಸ್ಥಿ ಮಾಡಬೇಕಾದ ಸ್ಥಳಿಯಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಗ್ರಾಮೀಣ ಭಾಗದ ಕಚ್ಚಾ ರಸ್ತೆಗಳು ವಾಹನ ಓಡಾಟಕ್ಕೂ ಅನರ್ಹವಾಗಿವೆ. ನಮ್ಮ ಊರಿನ ರಸ್ತೆಗಳ ದುರಸ್ಥಿಗೆ ಮನವಿ ಮಾಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ. ಹಾಗಾಗಿ ಸ್ಥಳೀಯ ಯುವಕರೇ ಸೇರಿಕೊಂಡು ರಸ್ತೆ ದುರಸ್ಥಿಗೆ ಇಳಿದಿದ್ದಾರೆ. ನಮ್ಮ ರಸ್ತೆ ನಮ್ಮ ಆಸ್ತಿ ಎಂಬಂತೆ ರಸ್ತೆಗಳ ದುರಸ್ಥಿ ಮಾಡುವ ಮೂಲಕ ಗ್ರಾಪಂಗೆ ಎಚ್ಚರಿಕೆ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಬಜತ್ತೂರು ಗ್ರಾಮ ಪಂಚಾಯತ್ ರಸ್ತೆಯಾಗಿರುವ ಹೊಸಗದ್ದೆ-ಮಣಿಕ್ಕಳ ರಸ್ತೆಯ ಸ್ಥಿತಿ ತೀರಾ ಕೆಟ್ಟುಹೋಗಿದ್ದು, ಇದರಲ್ಲಿ ವಾಹನಸಂಚಾರ ನಡೆಸುವುದೇ ಸ್ಥಳೀಯರಿಗೆ ಸಾಹಸವಾಗುತ್ತಿದೆ. ಈ ಹಿನ್ನಲೆಯಲ್ಲಿ ಮಣಿಕ್ಕಳ ಗ್ರಾಮದ ಯುವಕರು ಈ ರಸ್ತೆಯ ದುರಸ್ಥಿಗೆ ಮುಂದಾಗಿದ್ದಾರೆ. ಈ ಬಾರಿ ತೀವ್ರಗತಿಯಲ್ಲಿ ಸುರಿದ ಮಳೆಯಿಂದ ರಸ್ತೆಯ ಬಹುತೇಕ ಭಾಗಗಳು ಹೊಂಡಗುಂಡಿಯಿಂದ ಕೂಡಿದ್ದು, ಈ ಹೊಂಡಗಳಿಗೆ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅನುಕೂಲ ಮಾಡುವ ಕೆಲಸಕ್ಕೆ ಯುವಕರ ತಂಡ ಮುಂದಾಗಿದ್ದಾರೆ.
ಮಳೆಗಾಲ ಮುಗಿದ ತಕ್ಷಣ ಈ ಗ್ರಾಮೀಣ ರಸ್ತೆಗಳನ್ನು ದುರಸ್ಥಿ ಮಾಡುವುದು ಗ್ರಾಮಪಂಚಾಯತ್ ಜವಾಬ್ದಾರಿ. ಆದರೆ ಈ ಬಗ್ಗೆ ಚಿಂತೆಯೇ ಮಾಡದ ಗ್ರಾಪಂ ಆಡಳಿತದ ವೈಖರಿಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತೆರಿಗೆ ಸಂಗ್ರಹಕ್ಕೆ ಸದಾ ಬಾಯ್ದೆರೆದು ಕುಳಿತುಕೊಳ್ಳುವ ಗ್ರಾಪಂ ಅಧಿಕಾರಿ ವರ್ಗ ಜನತೆಯ ಅತೀ ಅಗತ್ಯದ ರಸ್ತೆಗಳ ಅಭಿವೃದ್ಧಿ ವಿಚಾರ ಬಂದಾಗ ಮಾತ್ರ ಮೌನಾಚರಣೆ ಮಾಡುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಗ್ರಾಪಂಗೆ ಮನಗಾಣುವಂತೆ ಮಾಡಲು ಈ ಯುವಕರ ತಂಡ ಇದೀಗ ರಸ್ತೆ ದುರಸ್ಥಿಗೆ ಹೊರಟಿದ್ದಾರೆ. ಇನ್ನಾದರೂ ಗ್ರಾಪಂ ಎಚ್ಚೆತ್ತುಕೊಂಡು ಗ್ರಾಮಪಂಚಾಯತಿಯ ಕಚ್ಚಾ ರಸ್ತೆಗಳ ದುರಸ್ಥಿಗೆ ಮುಂದಾಗಬೇಕು ಎಂಬುವುದು ಯುವಕರ ಆಶಯ.
ಸುಮಾರು ಒಂದೂವರೆ ಕಿಮೀ ವ್ಯಾಪ್ತಿಯ ಈ ರಸ್ತೆಯಲ್ಲಿ ಮಣಿಕ್ಕಳ ಗ್ರಾಮದ ಜನತೆ, ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಪೆರಿಯಡ್ಕ ಸವೋದಯ ಪ್ರೌಢಶಾಲೆಯ ಮಕ್ಕಳು ಸಂಚರಿಸುತ್ತಾರೆ. ಕಳೆದ ಬಾರಿ ಈ ರಸ್ತೆಯನ್ನು ನಾಮಾಕಾವಸ್ಥೆಗೆ ಕೆಲ ಭಾಗದಲ್ಲಿ ಮಾತ್ರ ದುರಸ್ಥಿ ಮಾಡಿದಂತೆ ಬಜತ್ತೂರು ಗ್ರಾಪಂ ನಟಿಸಿತ್ತು. ಈ ಬಗ್ಗೆ ಗ್ರಾಪಂಗೆ ಸ್ಥಳೀಯ ಜನತೆ ತಮ್ಮ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಕನಿಷ್ಟ ಇದರ ಹೊಂಡಗಳನ್ನು ಮುಚ್ಚಿಸುವ ಕೆಲಸಕ್ಕೂ ಸ್ಥಳೀಯಾಡಳಿತ ಮುಂದಾಗಿಲ್ಲ. ಇದೀಗ ಯುವಕರ ಕಾಯಕವನ್ನು ನೋಡಿಯಾದರೂ ಗ್ರಾಪಂ ರಸ್ತೆ ದುರಸ್ಥಿಯತ್ತ ತಮ್ಮ ಚಿತ್ತ ಹರಿಸಬೇಕಾಗಿದೆ.
ಮಣಿಕ್ಕಳ ಗ್ರಾಮದ ರುಕ್ಮಯ್ಯ ಗೌಡ ಓಮಂದೂರು, ಸುಧಾಕರ ನಾಯ್ತೊಟ್ಟು, ಲೋಕೇಶ್ ಪಾಲೆತ್ತಾಡಿ, ಚೆನ್ನಪ್ಪ ಗೌಡ ಓಮಂದೂರು, ಯಶೋಧರ ಗೌಡ ಬೈರುಮಾರು, ಉಮೇಶ್ ಗೌಡ ಓಮಂದೂರು, ಸೋನಿತ್, ಹರಿಪ್ರಸಾದ್, ವೀರಪ್ಪ ಓಮಂದೂರು, ಕೇಶವ ಓಮಂದೂರು, ಪ್ರದೀಪ್ ಓಮಂದೂರು ಮತ್ತಿತರರು ರಸ್ತೆ ದುರಸ್ತಿ ಕಾಯಕ ನಡೆಸಿದರು.