
ಮಹಿಳೆಯ ಕಾಲು ಸಿಲುಕಿದ ಚರಂಡಿಗೆ ನಗರಸಭೆಯಿಂದ ಸರಳ ಉಪಾಯದ ದುರಸ್ಥಿ..!
Tuesday, December 31, 2024
ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಎಂತಹ ಅದ್ಬುತ ಚಿಂತನೆಯ ಅಧಿಕಾರಿ ವರ್ಗ ಇದ್ದಾರೆ ಎಂಬುವುದಕ್ಕೆ ಇದೊಂದೇ ಪ್ರಕರಣ ಸಾಕು. ಚರಂಡಿಗೆ ಹಾಕಲಾದ ಪೈಪ್ ತುಂಡಾಗಿ ಹಲವು ಕಾಲ ಕಳೆದರೂ ಎಚ್ಚೆತ್ತುಕೊಳ್ಳದ ನಗರಸಭೆಯ ಅಧಿಕಾರಿ ವರ್ಗ ಮಹಿಳೆಯೊಬ್ಬರ ಕಾಲು ಈ ಚರಂಡಿಗೆ ಹಾಕಲಾದ ಪೈಪ್ ನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ನಗರಸಭೆಯ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ಪೈಪ್ ಅಳವಡಿಕೆಗೆ ಬೇಕಾದ ಖರ್ಚು ವೆಚ್ಚ ಲೆಕ್ಕ ಹಾಕಿದ್ದಾರೆ. ಆದರೆ ಮಾಡಿದ್ದೇನು ಗೊತ್ತೇ..! ತುಂಡಾದ ಪೈಪ್ ಭಾಗಕ್ಕೆ ಎರಡು ಕಲ್ಲು ಇಟ್ಟು ಸರ್ಕಾರಕ್ಕೆ ಒಂದಿನಿತೂ ಹೊರೆಯಾಗದಂತೆ ಪರಿಹಾರ ಕಂಡುಕೊಂಡಿದ್ದಾರೆ...!
ಪುತ್ತೂರು ನಗರಸಭೆಯ ಈ ಜಾಣ್ಮೆಯ ಪರಿಹಾರ ಇದೀಗ ಇಲ್ಲಿನ ಜನತೆಯನ್ನು ಕಿಚಾಯಿಸುತ್ತಿದೆ. ಮಹಿಳೆ ಕಾಲಿಗೆ ಪೆಟ್ಟು ಮಾಡಿಕೊಂಡು ನರಳುವಂತೆ ಮಾಡಿದ ಈ ಚರಂಡಿಗೆ ಹೀಗೊಂದು ಸರಳ ಪರಿಹಾರ ಕಂಡುಕೊಳ್ಳಲು ನಗರಸಭೆಯ ಇಂಜಿನಿಯರ್‌ಗಳಿಂದ ಮಾತ್ರ ಸಾಧ್ಯ ಎಂಬುವುದನ್ನು ಸಾಬೀತು ಮಾಡಿದ್ದಾರೆ. ಬಹುಷಃ ಈ ಸರಳ ಉಪಾಯವನ್ನು ಪೈಪ್ ತುಂಡಾದ ಸಮಯದಲ್ಲಿಯೇ ಮಾಡುತ್ತಿದ್ದರೆ, ಈ ಮಹಿಳೆ ಕಾಲು ಸಿಲುಕಿಕೊಂಡು ಪರದಾಟ ಮಾಡಬೇಕಾದ ಸ್ಥಿತಿಯೂ ಬರುತ್ತಿರಲಿಲ್ಲ ಎನ್ನುವುದು ಸ್ಥಳೀಯರ ಮಾತು.