
ಪೈಪ್‌ನಲ್ಲಿ ಕಾಲು ಸಿಲುಕಿ ಪರದಾಡಿದ ಮಹಿಳೆ
ಪುತ್ತೂರು: ಚರಂಡಿಯೊಂದಕ್ಕೆ ಹಾಕಲಾದ ಪೈಪ್ ಅಳವಡಿಕೆಯಲ್ಲಿ ಪೈಪೊಂದು ತುಂಡಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ಮಹಿಳೆಯೊಬ್ಬರು ಕಾಲು ಸಿಲುಕಿಕೊಂಡು ಪರದಾಡಿದ ಘಟನೆಯೊಂದು ಸೋಮವಾರ ಸಂಜೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಮುಖ್ಯ ರಸ್ತೆಯ ಹೂವಿನ ಮಾರುಕಟ್ಟೆ ಬಳಿಯಲ್ಲಿ ಕಾಲೊನಿಗೆ ಹೋಗುವ ರಸ್ತೆಯ ಚರಂಡಿಗೆ ಈ ಪೈಪ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ಪೈಪೊಂದು ತುಂಡಾಗಿತ್ತು. ಇದನ್ನು ಗಮನಿಸದ ಬುರ್ಖಾಧಾರಿ ಮಹಿಳೆಯೊಬ್ಬರ ಕಾಲು ಪೈಪ್ ನಡುವೆ ಸಿಲುಕಿಕೊಂಡಿತು. ಸ್ಥಳೀಯರು ತಕ್ಷಣ ಈ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಆದರೆ ಕಾಲು ಸಿಲುಕಿಕೊಂಡ ಕಾರಣ ತಕ್ಷಣ ಪೈಪ್‌ಗಳ ನಡುವಿನಿಂದ ಕಾಲನ್ನು ತೆಗೆಯಲು ಬಹಳಷ್ಟು ಪರದಾಡಬೇಕಾಯಿತು.
ಪುತ್ತೂರು ನಗರಸಭಾ ವ್ಯಾಪ್ತಿಯ ಈ ಚರಂಡಿಗೆ ಪೈಪ್ ಅಳವಡಿಕೆ ಮಾಡಿರುವುದು ಕೆಲ ಸಮಯದ ಹಿಂದೆಯೇ ತುಂಡಾಗಿತ್ತು. ಈ ಬಗ್ಗೆ ಕಾಲೊನಿ ಜನತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಈ ಬಗ್ಗೆ ನಗರಸಭೆಯ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳದ ಕಾರಣ ಮಹಿಳೆಯೊಬ್ಬರು ಸಮಸ್ಯೆಗೆ ಒಳಗಾಗಬೇಕಾಯಿತು. ಇನ್ನಾದರೂ ಅಧಿಕಾರಿಗಳ ಎಚ್ಚೆತ್ತುಕೊಂಡು ತುಂಡಾದ ಪೈಪ್ ತೆಗೆದು ಹೊಸ ಪೈಪ್ ಅಳವಡಿಕೆ ಮಾಡಬೇಕಾಗಿದೆ ಎಂಬುವುದು ಸ್ಥಳೀಯರ ಬೇಡಿಕೆಯಾಗಿದೆ.