
ಕುಕ್ಕೆ: ಜ.2 ರಿಂದ ಜ.5 ರ ತನಕ ಕಿರುಷಷ್ಠಿ ಸಾಂಸ್ಕೃತಿಕ ವೈಭವ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.2 ರಿಂದ 5 ರತನಕ 4 ದಿನಗಳ ಕಾಲ ಕಿರುಷಷ್ಠಿ ಮಹೋತ್ಸವ, ಧಾರ್ಮಿಕ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಜ.5 ರಂದು ಸಂಜೆ 6.30ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಮತ್ತು ಕುಕ್ಕೆ ಬೆಡಿ ನೆರವೇರಲಿದೆ.
ಜ.2 ರಂದು ಚಾಲನೆ:
ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ಜ.2ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಲಾ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಮುಖ್ಯ ಅತಿಥಿಗಳಾಗಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದ ಬಳಿಕ ಅಂಕುಶ್ ಎನ್. ನಾಯಕ್ ಬಳಗದಿಂದ ಸೀತಾರ್ ವಾದನ ನಡೆಯಲಿದೆ. ನಂತರ ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ ಕೊಚ್ಚಿನ್ ಇವರಿಂದ ಕೊಳಲು ವಾದನ ನೆರವೇರಲಿದೆ. ಇವರಿಗೆ ವಯಲೀನ್‌ನಲ್ಲಿ ವಿದ್ವಾನ್ ಮಾಂಜೂರ್ ರಂಜಿತ್, ಮೃದಂಗಂ ವಿದ್ವಾನ್ ಡಾ. ಕೆ. ಜಯಕೃಷ್ಣನ್, ಘಟಂ ವಿದ್ವಾನ್ ಮಾಂಜೂರ್ ಉಣ್ಣಿಕೃಷ್ಣನ್ ಹಿಮ್ಮೇಳ ಸಹಕಾರ ನೀಡಲಿದ್ದಾರೆ.ನಂತರ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆ ತಂಡದಿಂದ ನೃತ್ಯ ಸಂಭ್ರಮ, ಬಳಿಕ ಮನೋಜ್ ಕುಮಾರ್ ಪೂಕುನ್ನತ್ ಪೊಯಿನಾಚಿ ಇವರಿಂದ ಸ್ವರ ರಾಗಂ ಆರ್ಕೆಸ್ಟ್ರಾ ನಡೆಯಲಿದೆ.
ಜ.3ರಂದು ನಟರಾಜ್ ಎಂಟರ್‌ಟ್ರೈರ‍್ಸ್ನಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ರಾತ್ರಿ 7 ರಿಂದ 10 ರ ತನಕ ನಡೆಯಲಿದೆ. ಈ ಮೊದಲು ಸಂಜೆ 5 ರಿಂದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ನೃತ್ಯ ಸಂಭ್ರಮ, ಬಳಿಕ ಮೂಡಬಿದಿರೆಯ ಶ್ರೀ ಆರಾಧನಾ ನೃತ್ಯ ಕೇಂದ್ರದ ಗುರು ವಿದುಷಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ನೆರವೇರಲಿದೆ.
ಜ.4ರಂದು ಸಂಜೆ ಗಂಟೆ 5ರಿಂದ ನೇಹಾ ರಕ್ಷಿತ್ ಮಂಗಳೂರು ಇವರಿಂದ ಭಾವ-ಭಕ್ತಿ ಸಂಚನ ನಡೆಯಲಿದೆ. ಬಳಿಕ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ ಇವರಿಂದ ವಯಲೀನ್ ವಾದನ ನೆರವೇರಲಿದೆ. ನಂತರ ವಿದ್ವಾನ್ ಹರಿಕೃಷ್ಣನ್ ಎರ್ನಾಕುಲಂ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಲಿದೆ. ಬಳಿಕ ಶ್ರೀ ದೇವಿ ಮಹಿಳಾ ಯಕ್ಷ ತಂಡ ಪುತ್ತೂರು ಇವರಿಂದ ಮಾತೃ ದರ್ಶನ ಷಣ್ಮುಖ ವಿಜಯ ಯಕ್ಷಗಾನ ಪ್ರದರ್ಶಿತವಾಗಲಿದೆ.
ಜ.5ರಂದು 4.30ರಿಂದ ವಿಶ್ವ ದಾಖಲೆ ಮಾಡಿದ ಯೋಗಪಟು ಗೌರಿತಾ ಕೆ.ಜಿ ಇವರಿಂದ ಯೋಗ ನೃತ್ಯ ನಡೆಯಲಿದೆ. ನಂತರ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯರಿಂದ ಸನಾತನ ನೃತ್ಯಾಂಜಲಿ ಪ್ರದರ್ಶಿತವಾಗಲಿದೆ. ನಂತರ ಅವನಿ ನಾಯಕ್ ಪುತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಲಿದೆ. ಬಳಿಕ ಕೌಸ್ತುಭ ಕಲಾ ಸೇವಾ ಟ್ರಸ್ಟ್ ಕೂಜುಗೋಡು ಇವರಿಂದ ಮಕ್ಕಳ ಯಕ್ಷಗಾನ ಶ್ರೀರಾಮ ದರ್ಶನ, ನಂತರ ಕಲಾಗ್ರಾಮ ಕಲ್ಮಡ್ಕ ಪ್ರಸ್ತುತ ಪಡಿಸುವ ಚೋಮನ ದುಡಿ ತುಳು ನಾಟಕ ಪ್ರದರ್ಶಿತವಾಗಲಿದೆ.
‘ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಿರುಷಷ್ಠಿ ಮಹೋತ್ಸವದ ಸಂದರ್ಭ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಚಂಪಾಷ್ಠಿಯಂದು ಉತ್ಸವಾಧಿಗಳ ಮೂಲಕ ಶ್ರೀ ದೇವರ ಸೇವೆ ನೆರವೇರಿದರೆ ಕಿರುಷಷ್ಠಿ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಗವಂತನ ಆರಾಧನೆ ಮಾಡುವುದು ಇಲ್ಲಿನ ವಿಶೇಷ.ಶ್ರೇಷ್ಠ ಕಲಾವಿದರು ತಮ್ಮ ಪ್ರತಿಭೆಯನ್ನು ಈ ಕಾರ್ಯಕ್ರಮದಲ್ಲಿ ಸಾಧರಪಡಿಸಲಿದ್ದಾರೆ.ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸುಗೊಳಿಸಬೇಕು’ ಎಂದು ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ ಹೇಳಿದರು.
‘ಶ್ರೀ ಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಬೇಕಾದ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಧಾರ್ಮಿಕ ಉಪನ್ಯಾಸ, ಕೊಳಲು ವಾದನ, ವಯಲೀನ್ ವಾದನ, ನೃತ್ಯ, ಸಂಗೀತ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಕ್ತಿಗಾನ, ಯಕ್ಷಗಾನ, ಸೇರಿದಂತೆ ೪ ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಆದಿತ್ಯವಾರ ಶ್ರೀ ದೇವರ ಕಿರುಷಷ್ಠಿ ರಥೋತ್ಸವ ನಡೆಯಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.