ಕುಕ್ಕೆ: ಹೊಸವರ್ಷಕ್ಕೆ ಭಕ್ತರಿಂದ ದೇವಳಕ್ಕೆ ಪುಷ್ಪಾಲಂಕಾರ ಸೇವೆ

ಕುಕ್ಕೆ: ಹೊಸವರ್ಷಕ್ಕೆ ಭಕ್ತರಿಂದ ದೇವಳಕ್ಕೆ ಪುಷ್ಪಾಲಂಕಾರ ಸೇವೆ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಹೊಸ ವರ್ಷದ ಅಂಗವಾಗಿ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ. ಬೆಂಗಳೂರಿನ ಭಕ್ತರು ನಿರಂತರವಾದ 7ನೇ ವರ್ಷದ ತಮ್ಮ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದ್ದಾರೆ. ಸುಮಾರು ರೂ.9 ಲಕ್ಷ ವೆಚ್ಚದ ಹೂವುಗಳನ್ನು ಉಪಯೋಗಿಸಿಕೊಂಡು ಶೃಂಗಾರ ಮಾಡಿದ್ದಾರೆ. ತೆಂಗಿನ ಸಿರಿ, ತರಕಾರಿ, ಹಣ್ಣುಗಳು ಮತ್ತು 6 ಬಗೆಯ ಹೂವನ್ನು ಉಪಯೋಗಿಸಿಕೊಂಡು ಶ್ರೀ ದೇವಳವನ್ನು ವೈಭವದಿಂದ ಅಲಂಕೃತಗೊಳಿಸಲಾಗಿದೆ.


ಬೆಂಗಳೂರಿನ ಉದ್ಯಮಿಗಳಾದ ಟಿ.ಎನ್. ಮಂಜುನಾಥ್, ಉಮೇಶ್, ಬಾಲಾಜಿ, ಶರತ್ ಬಾಬು, ಶೋಭನಾದ್ರಿ, ಕೃಷ್ಣಮೂರ್ತಿ, ರಾಜಣ್ಣ, ಪ್ರಸಾದ್, ಧರಣಿ ಸೇವೆ ನೆರವೇರಿಸಿದರು. 2018ರಿಂದ ತಮ್ಮ ಸೇವೆಯನ್ನು ಆರಂಭಿಸಿದ್ದ ಇವರು ಕಳೆದ ವರ್ಷ ರೂ 5ಲಕ್ಷ ವೆಚ್ಚದಲ್ಲಿ ಪುಷ್ಪಾಲಂಕಾರ ಮಾಡಿದ್ದರು. ಆದರೆ ಈ ವರ್ಷ ರೂ.9 ಲಕ್ಷ ವೆಚ್ಚದಲ್ಲಿ ವೈವಿಧ್ಯಮಯವಾಗಿ ಅಲಂಕಾರ ಮಾಡಿದ್ದಾರೆ. ಅಲ್ಲದೆ ಅತ್ಯಧಿಕ ಪ್ರಮಾಣದಲ್ಲಿ ಪುಷ್ಪಾಲಂಕಾರ ಮಾಡಿದ್ದಾರೆ.


ಶ್ರೀ ದೇವಳದ ಒಳಾಂಗಣ ಪ್ರವೇಶ ಸ್ಥಳದಲ್ಲಿ ಆಕರ್ಷಕ ದ್ವಾರವನ್ನು ನಿರ್ಮಿಸಿದ್ದಾರೆ. ತೆಂಗಿನ ಸಿರಿ ಮತ್ತು ತೆಂಗಿನ ಗರಿಯನ್ನು ಉಪಯೋಗಿಸಿಕೊಂಡು ಬೃಹತ್ ದ್ವಾರವನ್ನು ರಚಿಸಲಾಗಿದೆ. ಸುಬ್ರಹ್ಮಣ್ಯನ ವಾಹನವಾದ ನವಿಲನ್ನು ಸಿರಿ ಮತ್ತು ಗರಿಯಿಂದ ಮಾಡಿ ದ್ವಾರದ ಇಕ್ಕೆಲದಲ್ಲಿ ಇರಿಸಲಾಗಿದೆ. ದ್ವಾರದ ಎದುರು ಅರ್ಧಚಂದ್ರಾಕೃತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಇದರ ಮೇಲೆ ಷಣ್ಮುಖನ ಪುತ್ಥಳಿಯನ್ನು ಇರಿಸಲಾಗಿದೆ. ಇದಕ್ಕೆ ಅಲಲ್ಲಿ ಹಣ್ಣುಗಳನ್ನು ಪೋಣಿಸಲಾಗಿದ್ದು ಇದು ದೇವಳದ ಸೌಂದರ್ಯವನ್ನು ಹೆಚ್ಚಿಸಿದೆ.


ಹೂ, ತರಕಾರಿ, ತೆಂಗಿನ ಗರಿ ಹಾಗೂ ಸಿರಿ, ಹೂವಿನ ಎಲೆಗಳನ್ನು ಉಪಯೋಗಿಸಿಕೊಂಡು ಅಲಂಕಾರ ಮಾಡಲಾಗಿದೆ. ಸುಗಂಧರಾಜ, ಚೆಂಡು ಹೂ, ಸೇವಂತಿಗೆ, ಗುಲಾಬಿ, ಬಿಳಿ ಸೇವಂತಿಗೆ, ಬಿಳಿ ಚೆಂಡು ಹೂ, ಜೀನ್ಯವನ್ನು ಉಪಯೋಗಿಸಲಾಗಿದೆ. ಅಲ್ಲದೆ ಜೋಳ, ಅನನಾಸು, ದಾಳಿಂಬೆ, ಕಿತ್ತಾಳೆ, ಕರ್ಬೂಜ, ಮುಸುಂಬಿ, ಬಾಳೆಹಣ್ಣು, ಜೋಳದ ತೆನೆ, ಭತ್ತದ ತೆನೆಯನ್ನು ಬಳಸಲಾಗಿದೆ. ಶ್ರೀ ದೇವಳದ ರಾಜಗೋಪುರ, ಹೊರಾಂಗಣ, ಶ್ರೀ ದೇವಳದ ಸುತ್ತುಗೋಪುರ, ಒಳಾಂಗಣಗಳಲ್ಲಿ ಪುಷ್ಪಗಳಿಂದ ಅಲಂಕಾರ ಮಾಡಿದ್ದರು. ಒಳಾಂಗಣದಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಜೋಳ, ಅನನಾಸು, ದಾಳಿಂಬೆ, ಕಿತ್ತಾಳೆ, ಕರ್ಬೂಜ, ಮುಸುಂಬಿ, ಬಾಳೆಹಣ್ಣು, ಜೋಳದ ತೆನೆ, ಭತ್ತದ ತೆನೆಯನ್ನು ಮೊದಲಾದುಗಳಿಂದ ಶೃಂಗಾರ ಮಾಡಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article