
ಕುಕ್ಕೆ: ಮಹಾರಥೋತ್ಸವ ಸಂದರ್ಭ ಒತ್ತಡ ನಿವಾರಣೆಗೆ ಕಬ್ಬಿಣದ ತಡೆಬೇಲಿ: 6 ಉಚಿತ ಅಟೋ ವ್ಯವಸ್ಥೆ: 2 ಉಚಿತ ಬಸ್‌ಗಳು, ಅನ್ನಪೂರ್ಣ ವಿಶೇಷ ಬೋಜನ ಸತ್ರ-ವಿಶ್ರಾಂತಿ ಧಾಮ
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಧಾನ ಅಂಗವಾದ ಮಹಾರಥೋತ್ಸವದ ಸಂದರ್ಭ ಭಕ್ತರ ಒತ್ತಡ ನಿವಾರಣೆಗೆ ಸೂಕ್ತ ವ್ಯವಸ್ಥೆಯನ್ನು ಶ್ರೀ ದೇವಳದಿಂದ ಮಾಡಲಾಗಿದೆ. ಅಲ್ಲದೆ ಜಾತ್ರೋತ್ಸವಕ್ಕಾಗಿ ನೂತನ ಅನ್ನಸತ್ರ ಅಂಗಡಿಗುಡ್ಡೆಯಲ್ಲಿ ನಿರ್ಮಿತವಾಗಿದೆ. ಅಲ್ಲದೆ ಭಕ್ತರಿಗೆ ವಿಶ್ರಾಂತಿಗಾಗಿ ಮೂರು ವಿಶ್ರಾಂತಿಧಾಮ ನಿರ್ಮಿಸಲಾಗಿದೆ. ಅಲ್ಲದೆ ಶ್ರೀ ದೇವಳದ ವತಿಯಿಂದ ಪಂಚಮಿ ಮತ್ತು ಷಷ್ಠಿಯಂದು 6 ಅಟೋಗಳು ಭಕ್ತರನ್ನು ಕುಮಾರಧಾರದಿಂದ ಕಾಶಿಕಟ್ಟೆ ತನಕ ಕರೆತರಲಿದೆ.
ಈ ರೀತಿಯಾಗಿ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಭಕ್ತರ ಅನುಕೂಲತೆಗಾಗಿ ಶ್ರೀ ದೇವಳದಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದಾರೆ. ಎಇಒ ಯೇಸುರಾಜ್ ಮತ್ತು ಅಭಿಯಂತರ ಉದಯ ಕುಮಾರ್ ಸ್ಥಳದಲ್ಲಿದ್ದು ವ್ಯವಸ್ಥೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಬ್ಬಿಣದ ತಡೆ ಬೇಲಿ:
ಶ್ರೀ ದೇವರ ಮಹಾರಥೋತ್ಸವದ ಸಂದರ್ಭ ಭಕ್ತರ ವಿಪರೀತ ಒತ್ತಡವಿರುತ್ತದೆ. ಒತ್ತಡ ನಿವಾರಣೆಗಾಗಿ ಈ ಹಿಂದೆ ಹಗ್ಗದ ಸಹಾಯದಿಂದ ಜನರನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ ಇದೀಗ ಆಡಳಿತ ಮಂಡಳಿಯು ಭದ್ರವಾದ ಮತ್ತು 20 ಅಡಿ ಎತ್ತರದ ಹಾಗೂ 4 ಅಡಿ ಎತ್ತರದ ಬಲಿಷ್ಠವಾದ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗಿದೆ. ಇದನ್ನು ಮಹಾರಥದ ಬಳಿಯಿಂದ ರಥಬೀದಿ ವೃತ್ತದ ತನಕ ಅಳವಡಿಸಲಾಗುವುದು. ಸುಮಾರು 200 ಮೀಟರ್ ಉದ್ದಕ್ಕೆ 20 ಕಬ್ಬಿಣದ ತಡೆಬೇಲಿಗಳನ್ನು ಹಾಕಲಾಗುವುದು. ಇದರಿಂದಾಗಿ ರಥೋತ್ಸವದ ಸಂದರ್ಭ ಭಕ್ತರು ನುಗ್ಗಿ ಬಂದು ಒತ್ತಡ ನಿರ್ಮಾಣ ಮಾಡುವುದು ತಪ್ಪಲಿದೆ. ಅಲ್ಲದೆ ರಥ ಎಳೆಯಲು ಈ ಹಿಂದಿನಂತೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮರಥೋತ್ಸವದ ಸೇವಾರ್ಥಿಗಳಿಗೆ ವಿಶೇಷ ಪಾಸು ನೀಡಲಾಗುವುದು.
ಪಂಚಮಿ ರಥಕ್ಕೆ ತಿರುಗಣೆ:
ಪಂಚಮಿ ರಥವನ್ನು ರಥಬೀದಿ ವೃತ್ತದ ಬಳಿ ತಿರುಗಿಸಲು ಯಾಂತ್ರಿಕೃತವಾದ ನೂತನ ತಿರುಗಣೆಯನ್ನು ಅಳವಡಿಸಲಾಗಿದೆ. ಇದರಿಂದಾಗಿ ರಥವು ವೃತ್ತದ ಬಳಿ ನಿಲ್ಲದೆ ಸರಾಗವಾಗಿ ಮುಂದೆ ಚಲಿಸಲು ಅನುಕೂಲವಾಗುತ್ತದೆ. ಈ ಹಿಂದೆ ವೃತ್ತದ ಬಳಿ ನಿಲ್ಲಿಸಿ ಅದಕ್ಕೆ ಜಾಕ್ ಅಳವಡಿಸಿ ತಿರುಗಿಸಬೇಕಿತ್ತು. ಇದೀಗ ಸ್ಟೇರಿಂಗ್ ಮಾದರಿಯ ಯಂತ್ರ ಅಳವಡಿಸಿದ ಕಾರಣ ರಥವು ತಡೆ ರಹಿತವಾಗಿ ಚಲಿಸಲಿದೆ.
ವಿಶೇಷ ಪಾರ್ಕಿಂಗ್ ವ್ಯವಸ್ಥೆ:
ಕುಮಾರಧಾರ ಪಾರ್ಕಿಂಗ್, ಹೆಲಿಪ್ಯಾಡ್ ನಿಲ್ದಾಣ, ಜ್ಯೂನಿಯರ್ ಕಾಲೇಜು ಮೈದಾನ, ವಲ್ಲೀಶ ಸಭಾಭವನದ ಅಂಗಣ, ಕೆಎಸ್‌ಎಸ್ ಕಾಲೇಜಿನ ಮೈದಾನ, ಬಿಲದ್ವಾರ, ಸವಾರಿ ಮಂಟಪ ಬಳಿ ಪಾರ್ಕಿಂಗ್ ಸ್ಥಳಗಳಲ್ಲಿ ವಿದ್ಯುತ್ ಸಿಸಿ ಟಿವಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.ಶ್ರೀ ದೇವಳದ ಇಂಜಾಡಿ ತೋಟದಲ್ಲಿ ಈ ಬಾರಿ ಮೂರು ಹಂತದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಸುಮಾರು 300 ವಾಹನಗಳು ನಿಲುಗಡೆಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕುಲ್ಕುಂದ ವಿಷ್ಣುಮೂರ್ತಿ ದೈವಸ್ಥಾನದ ಮುಂಭಾಗದ ಆಶ್ರಯ ವಸತಿಗೃಹದ ಸ್ಥಳದಲ್ಲಿ ಘನ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಕುಮಾರಸ್ವಾಮಿ ವಿದ್ಯಾಲಯದ 2 ಮಿನಿ ಬಸ್‌ಗಳು ಭಕ್ತರನ್ನು ಉಚಿತವಾಗಿ ಕರೆದುತರಲಿದೆ.
ಉಚಿತ ಅಟೋ ವ್ಯವಸ್ಥೆ:
ಈ ಭಾರಿ ಕುಮಾರಧಾರದಿಂದ ಕಾಶಿಕಟ್ಟೆ ತನಕ ಉಚಿತ ಅಟೋ ವ್ಯವಸ್ಥೆ ಇದೆ. ಶ್ರೀ ದೇವಳದಿಂದ 6 ಅಟೋಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಪಂಚಮಿ ಮತ್ತು ಷಷ್ಠಿಯ ದಿನ ಕುಮಾರಧಾರದಿಂದ ಕಾಶಿಕಟ್ಟೆ ತನಕ ಮತ್ತು ಸುಳ್ಯ ರಸ್ತೆಯ ಇಂಜಾಡಿ ಸೇತುವೆ ತನಕ ಉಚಿತ ಅಟೋ ವ್ಯವಸ್ಥೆಯನ್ನು ಶ್ರೀ ದೇವಳದ ಆಡಳಿತ ಮಾಡಿದೆ.
ಅನ್ನಪೂರ್ಣ ಸತ್ರ:
ಬೋಜನ ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಶ್ರೀ ದೇವಳದ ಸಮೀಪದ ಅಂಗಡಿಗುಡ್ಡೆಯಲ್ಲಿ ವಿಶೇಷ ಬೋಜನ ಸತ್ರ ಅನ್ನಪೂರ್ಣವನ್ನು ನಿರ್ಮಿಸಲಾಗಿದೆ. ಇಲ್ಲಿ 4 ಕೌಂಟರ್‌ನಲ್ಲಿ ಭಕ್ತರು ಬಫೆ ಮಾದರಿಯಲ್ಲಿ ಪ್ರಸಾದ ಬೋಜನ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಬರಲು ಮತ್ತು ತೆರಳಲು ರಸ್ತೆ ವ್ಯವಸ್ಥೆ ಮಾಡಲಾಗಿದೆ ಅದೇ ರೀತಿ ಷಣ್ಮುಖ ಪ್ರಸಾದ, ಆದಿಸುಬ್ರಹ್ಮಣ್ಯ ಬೋಜನಶಾಲೆ, ಗಣಪತಿ ದೇವಸ್ಥಾನ ಮತ್ತು ಶೃಂಗೇರಿ ಮಠದಲ್ಲಿ ಪ್ರಸಾದ ಬೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಚತಾ ಜಾಗೃತಿ:
ಜಾತ್ರಾ ವೇಳೆ ಅಧಿಕ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ಹಾಗಾಗಿ ಭಕ್ತರು ಗರಿಷ್ಠ ಪ್ರಮಾಣದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸ್ವಚ್ಚತಾ ಜಾಗೃತಿ ಫಲಕವನ್ನು ಕ್ಷೇತ್ರಾದ್ಯಂತ ಅಲ್ಲಲ್ಲಿ ಅಳವಡಿಸಲಾಗಿದೆ. ಭಕ್ತರು ಸ್ವಚ್ಚತೆಗೆ ಗರಿಷ್ಠ ಪ್ರಮಾಣದಲ್ಲಿ ಆದ್ಯತೆ ನೀಡಬೇಕಾಗಿ ಶ್ರೀ ದೇವಳದ ಆಡಳಿತ ವಿನಂತಿಸಿದೆ. ಆಗಾಗ್ಗೆ ಕುಮಾರಧಾರದಿಂದ ಗೋಪುರದ ತನಕ ರಸ್ತೆಯನ್ನು ಗುಡಿಸಿ ಶುಚಿ ಮಾಡಲಾಗುತ್ತಿದೆ. ಇದಲ್ಲದೆ ಅಲ್ಲಲ್ಲಿ ಮೊಬೈಲ್ ಶೌಚಾಲಯಗಳು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಥಬೀದಿಯಲ್ಲಿ ತುರ್ತು ಚಿಕಿತ್ಸಾ ಘಟಕ, ಪೋಲಿಸ್ ಚೌಕಿ ಮಾಡಲಾಗುವುದು. ಅಲ್ಲದೆ ಸೂಕ್ತ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಆಗಾಗ್ಗೆ ಮಾಹಿತಿ ತಿಳಿಸುವ ವ್ಯವಸ್ಥೆ ನಿರ್ಮಿಸಲಾಗಿದೆ. ಅಲ್ಲದೆ ಕ್ಷೇತ್ರಾದ್ಯಂತ ಬೆಳಕಿಗಾಗಿ ಟ್ಯೂಬ್ ಲೈಟ್‌ಗಳನ್ನು ಅಳವಡಿಸಲಾಗಿದೆ.
ವಿಶ್ರಾಂತಿ ಧಾಮ:
ಭಕ್ತರಿಗೆ ವಿಶ್ರಾಂತಿ ಮಾಡಲು ಕ್ಷೇತ್ರದಲ್ಲಿ ಮೂರು ಕಡೆ ವಿಶ್ರಾಂತಿ ಧಾಮಗಳನ್ನು ಮಾಡಲಾಗಿದೆ. ರಥಬೀದಿಯ ಎಡಪಾರ್ಶ್ವದಲ್ಲಿ ಇದ್ದ ಕಟ್ಟಡಗಳನ್ನು ತೆರವುಗೊಳಿಸಿ ಸಮತಟ್ಟು ಮಾಡಲಾಗಿದೆ ಇಲ್ಲಿ ವಿಶ್ರಾಂತಿ ಧಾಮ ನಿರ್ಮಿಸಲಾಗಿದೆ. ಇಲ್ಲಿ ನೆಲಕ್ಕೆ ಇಂಟರ್‌ಲಾಕ್ ಅಳವಡಿಸಿ ಅದರ ಮೇಲೆ ಮ್ಯಾಟ್ ಹಾಕಿ ಭಕ್ತರಿಗೆ ವಿಶ್ರಾಂತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ರಥಬೀದಿಯ ಬಲಗಡೆ ಮತ್ತು ಷಣ್ಮಯಖ ಪ್ರಸಾದ ಬೋಜನ ಶಾಲೆಯ ಪಕ್ಕದಲ್ಲಿ ವಿಶೇಷ ವಿಶ್ರಾಂತಿ ಧಾಮ ನಿರ್ಮಿಸಲಾಗಿದೆ. ಇವುಗಳು ಭಕ್ತರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ.
‘ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಬರುವ ಭಕ್ತರಿಗೆ ಬೋಜನ ಪ್ರಸಾದ ಸ್ವೀಕರಿಸಲು ಅನುಕೂಲವಾಗಲು ಅಂಗಡಿಗುಡ್ಡೆಯಲ್ಲಿ ವಿಶೇಷ ಬೋಜನಾಲಯ ನಿರ್ಮಿಸಲಾಗಿದೆ.ಭಕ್ತರಿಗೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಧಾಮ ನಿರ್ಮಿಸಲಾಗಿದೆ. ಭಕ್ತರಿಗೆ ಸೂಕ್ತ ಮಾಹಿತಿ ಒದಗಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಸಮಯ ಸ್ವಚ್ಚತೆ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಗಮನ ಕೊಡಲಾಗುವುದು. ಆದುದರಿಂದ ಕ್ಷೇತ್ರಾದ್ಯಂತ ಅಲ್ಲಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲು ಹೆಚ್ಚಿನ ಒತ್ತು ನೀಡಲಾಗಿದೆ’-ಜುಬಿನ್ ಮೊಹಪಾತ್ರ, ಆಡಳಿತಾಧಿಕಾರಿಗಳು.
‘ಮಹಾರಥೋತ್ಸವ ಸಂದರ್ಭ ಭಕ್ತರ ಒತ್ತಡ ನಿಯಂತ್ರಣಕ್ಕೆ ಕಬ್ಬಿಣದ ವಿಶೇಷ ತಡೆಬೇಲಿ ನಿರ್ಮಿಸಲಾಗಿದೆ.ಭಕ್ತರಿಗೆ ಅನುಕೂಲವಾಗಲು ರಥಬೀದಿಯಲ್ಲಿ ತುರ್ತುಚಿಕಿತ್ಸಾ ಘಟಕ ತೆರೆಯಲಾಗುವುದು. ಅಲ್ಲದೆ ಭಕ್ತರ ಉಪಯೋಗಕ್ಕಾಗಿ ಉಚಿತ ಅಟೋ ಸೇವೆಯನ್ನು ಶ್ರೀ ದೇವಳದಿಂದ ಮಾಡಲಾಗಿದೆ’-ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿಗಳು.