ಶ್ರದ್ಧಾ ಭಕ್ತಿಯಿಂದ ನೆರವೇರಿದ ಕುಕ್ಕೆ ಸುಬ್ರಹ್ಮಣ್ಯನ ಚಂಪಾಷಷ್ಠಿ ಮಹಾರಥೋತ್ಸವ
ಸುಬ್ರಹ್ಮಣ್ಯ: ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಶನಿವಾರ ಮುಂಜಾನೆ ಭಕ್ತಜನರ ಸಮ್ಮುಖದಲ್ಲಿ ಬ್ರಹ್ಮರಥದಲ್ಲಿ ಭಕ್ತಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ಸುಸಂಪನ್ನವಾಯಿತು.
ಬೆಳಗ್ಗೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು. ಶ್ರೀ ದೇವಳದ ಪ್ರಧಾನ ಅರ್ಚಕ ವೇ.ಮೂ. ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿವಿಧ ವೈಧಿಕ ವಿದಿವಿಧಾನ ನೆರವೇರಿಸಿದರು. ಸಹಸ್ರಾರು ಭಕ್ತರ ಜಯಘೋಷದ ನಡುವೆ ಭಕ್ತಿಯಿಂದ ಭಕ್ತರು ಶ್ರೀ ದೇವರ ಮಹಾರಥವನ್ನು ಎಳೆದರು.
ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು 150 ಭಕ್ತರು ಸಲ್ಲಿಸಿದ್ದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ಅನ್ನು ನೀಡಲಾಗಿತ್ತು. ಅಲ್ಲದೆ ಬ್ರಹ್ಮರಥ ಎಳೆಯುವ ಸಂದರ್ಭ ಅನವಶ್ಯಕ ಗೊಂದಲ ನಿವಾರಿಸಲು ಸಲುವಾಗಿ ರಥ ಎಳೆಯುವ ಭಕ್ತರಿಗೆ ಪಾಸ್‌ಗಳನ್ನು ನೀಡಲಾಗಿತ್ತು. ಇದರಿಂದ ಬ್ರಹ್ಮರಥೋತ್ಸವವು ಅಚ್ಚುಕಟ್ಟಾಗಿ ಸಂಪನ್ನವಾಯಿತು. ಸಹಸ್ರಾರು ಭಕ್ತರು ಶ್ರೀ ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತಾರ್ಥರಾದರು.
ಮೊದಲು ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಆನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು.
ಪೂಜೆಯ ಬಳಿಕ ಶ್ರೀ ದೇವಳದ ಪ್ರಧಾನ ಅರ್ಚಕ ವೇ.ಮೂ. ಸೀತಾರಾಮ ಎಡಪಡಿತ್ತಾಯರು ಶ್ರೀದೇವರಿಗೆ ಸುವರ್ಣವೃಷ್ಠಿಗೈದರು. ಬಳಿಕ ಭಕ್ತಾಧಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತಾಧಿಗಳು ನಾಣ್ಯ, ಕಾಳು ಮೆಣಸು, ಸಾಸಿವೆಗಳನ್ನು ರಥಕ್ಕೆ ಸಮರ್ಪಿಸಿದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಭಕ್ತ ಜನರ ಬಹುಪರಾಕಿನೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.
ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಮಹಾರಥೋತ್ಸವವನ್ನು ಮತ್ತು ಬ್ರಹ್ಮರಥಾರೂಢರಾದ ಶ್ರೀ ದೇವರ ದರುಶನವನ್ನು ಸಹಸ್ರಾರು ಭಕ್ತಾಧಿಗಳು ಪಡೆದರು. ಭಕ್ತಿ ಮತ್ತು ಸಡಗರದ ಸಮ್ಮಿಲನದಲ್ಲಿ ರಥಬೀದಿಯಲ್ಲಿ ಸಾಗಿ ಬಂದ ರಾಜಗಂಭೀರ‍್ಯದ ಬ್ರಹ್ಮರಥವು ಭಕ್ತರ ಭಯಭಕ್ತಿಯ ಸಮ್ಮಿಶ್ರದ ನಡುವೆ ಸುಸಂಪನ್ನವಾಯಿತು.ಬಳಿಕ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ದೇವರಿಗೆ ಪೂಜೆ ನಡೆಯಿತು. ಶ್ರೀ ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಸರ್ವ ಭಕ್ತರಿಗೂ ಮೂಲಪ್ರಸಾದ ವಿತರಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಮಾಜಿ ಸಚಿವ ಬಿ.ರಮಾನಾಥ ರೈ, ಬ್ರಹ್ಮರಥ ದಾನಿ ಅಜಿತ್ ಶೆಟ್ಟಿ ಕಡಬ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮನೀಶ, ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ, ಸುಳ್ಯ ತಹಶಿಲ್ದಾರ್ ಮಂಜುಳಾ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಮೋಹನ್‌ರಾಂ.ಎಸ್.ಸುಳ್ಳಿ, ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಡಿವೈಎಸ್‌ಪಿ ಡಾ.ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ ಗೌಡ ಆಲ್ಕಬೆ, ದೇವಳದ ಅಭಿಯಂತರ ಉದಯಕುಮಾರ್, ಲೋಕೋಪಯೋಗಿ ಅಭಿಯಂತರ ಪ್ರಮೋದ್ ಕುಮಾರ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಅಧಿಕಾರಿಗಳು, ಜನಪ್ರತಿನಿಧಿಗಳು, ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಬೆತ್ತ ಶ್ರೀ ದೇವಳಕ್ಕೆ:
ಈ ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು. ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ಭಕ್ತರು ನೂಕು ನುಗ್ಗಲು ಮಾಡುತ್ತಿದ್ದರು. ಇದನ್ನು ತಪ್ಪಿಸಲು ಮತ್ತು ಶ್ರೀ ದೇವಳಕ್ಕೆ ಸಾಕಷ್ಟು ಬೆತ್ತವು ಮಹಾಪ್ರಸಾದದಲ್ಲಿ ನೀಡಲು ಅವಶ್ಯಕವಿದ್ದುದರಿಂದ ರಥ ಎಳೆಯಲು ಉಪಯೋಗಿಸಿದ ಎಲ್ಲಾ ಬೆತ್ತವನ್ನು ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು.
ಇದರಿಂದಾಗಿ ಅನಾವಶ್ಯಕ ಗೊಂದಲಕ್ಕೆ ಕಡಿವಾಣ ಬಿತ್ತು. ಬ್ರಹ್ಮರಥ ಎಳೆದ ಬೆತ್ತವು ಅಪೂರ್ವವಾದ ಸ್ಥಾನವನ್ನು ಪಡೆದಿದೆ. ಈ ಬೆತ್ತವನ್ನು ಭಕ್ತರು ತುಂಡು ಮಾಡಿ ತಮ್ಮ ಮನೆಗಳಿಗೆ ಬಾರಿ ಪೈಪೋಟಿಯೊಂದಿಗೆ ಕೊಂಡೊಯ್ಯುತ್ತಿದ್ದರು. ಇದರಿಂದಾಗಿ ಸಮಸ್ಯೆ ಉದ್ಭವಿಸುತ್ತಿತ್ತು. ದೇವಳದಲ್ಲಿ ನಡೆಯುವ ಸೇವೆಗಳಿಗೆ ಕೊಡುವ ಮಹಾಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತಿದೆ. ಇದೀಗ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವುದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ಹಾಗೂ ಭಕ್ತರಲ್ಲಿ ಬೆತ್ತಕ್ಕಾಗಿ ಪೈಪೋಟಿ ನಡೆಯಬಾರದು ಎಂದು ಈ ಬಾರಿ ರಥ ಎಳೆದ ಎಲ್ಲಾ ಬೆತ್ತವನ್ನು ಶ್ರೀ ದೇವಳವೇ ಪಡೆಯಿತು.
ಭಕ್ತ ಸಾಗರ:
ಚಂಪಾಷಷ್ಠಿಯ ದಿನ ನಾಗಾರಾಧನೆಯ ಪ್ರಧಾನ ಕ್ಷೇತ್ರ ಕುಕ್ಕೆಗೆ ಭಕ್ತ ಸಾಗರವೇ ಹರಿದು ಬಂದಿತ್ತು.ಬ್ರಹ್ಮರಥೋತ್ಸವದ ಸಂದರ್ಭ ರಥಬೀದಿಯ ಇಕ್ಕೆಲದಲ್ಲಿ ಮತ್ತು ರಥೋತ್ಸವದ ಬಳಿಕ ರಥಬೀದಿ ತುಂಬೆಲ್ಲ ಭಕ್ತ ಸಂದೋಹವೇ ಕಂಡು ಬಂದಿತ್ತು.ಆದಿಸುಬ್ರಹ್ಮಣ್ಯ, ಶ್ರೀ ದೇವಳದ ಹೊರಾಂಗಣ, ಒಳಾಂಗಣದಲ್ಲಿ ಭಕ್ತ ಸಾಗರವೇ ಕಂಡು ಬಂದಿತ್ತು. ಷಷ್ಠಿಯ ಸುದಿನ ಷಣ್ಮುಖ ಪ್ರಸಾದ ಬೋಜನ ಶಾಲೆ ಮತ್ತು ಅಂಗಡಿಗುಡ್ಡೆ ವಿಶೇಷ ಬೋಜನ ಸತ್ರ ಅನ್ನಪೂರ್ಣ, ಆದಿಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯ ತನಕ ನಿರಂತರವಾಗಿ ಅನ್ನಪ್ರಸಾದವನ್ನು ಸಹಸ್ರಾರು ಭಕ್ತರು ಸ್ವೀಕರಿಸಿದರು.ಸರದಿಯ ಸಾಲಿನಲ್ಲಿ ನಡೆದು ಪ್ರಸಾದ ಬೋಜನ ಸ್ವೀಕರಿಸಿದರು. ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಕುಮಾರಧಾರದಲ್ಲಿಯೇ ವಾಹನಗಳನ್ನು ತಡೆದು ಪಾರ್ಕಿಂಗ್ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಪೋಲೀಸರು ಮಾಡಿದ್ದರು. ಇದರಿಂದಾಗಿ ಕ್ಷೇತ್ರದಲ್ಲಿ ವಾಹನ ದಟ್ಟಣೆ ಸಮಸ್ಯೆ ಬರಲಿಲ್ಲ. ಹಾಗಾಗಿ ಸಹಸ್ರಾರು ಭಕ್ತರು ವ್ಯವಸ್ಥಿತವಾಗಿ ರಸ್ತೆಯಲ್ಲಿ ತೆರಳು ಮತ್ತು ದೇವಳಕ್ಕೆ ಆಗಮಿಸಲು ಅನುಕೂಲವಾಯಿತು.
ನಾಳೆ ಅವಭೃತೋತ್ಸವ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಭಾನುವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರ ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿರುವುದು. ಈ ಮೊದಲು ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆಯ ಬಳಿ ಶ್ರೀದೇವರು ಅವಭೃತಕ್ಕೆ ತೆರಳಲಿದ್ದಾರೆ.

