
ಮತ್ಸ್ಯತೀರ್ಥಕ್ಕೆ ಬರುವ ದೇವರ ಮೀನುಗಳೇ ಕುಕ್ಕೆ ಜಾತ್ರೆಗೆ ವಿಶೇಷ ಅತಿಥಿಗಳು
ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಇದೀಗ ಚಂಪಾಷಷ್ಠಿ ಜಾತ್ರೋತ್ಸವದ ಸಡಗರ. ಶ್ರೀ ಕ್ಷೇತ್ರದ ಜಾತ್ರೋತ್ಸವಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ಶ್ರೀ ದೇವರದರುಶನ ಪಡೆದು ಉತ್ಸವಾಧಿಗಳನ್ನು ವೀಕ್ಷಿಸಿ ಕೃತಾರ್ಥರಾಗುತ್ತಾರೆ. ಹಲವಾರು ವೈಶಿಷ್ಠ್ಯತೆಗಳನ್ನು ಹೊಂದಿರುವ ಕುಕ್ಕೆ ಜಾತ್ರೆಗೆ ದೇವರ ಮೀನುಗಳು ಬರುವುದು ಮತ್ತೊಂದು ವಿಶೇಷ. ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರೋತ್ಸವದ ಸಂದರ್ಭ ಪವಿತ್ರ ಕುಮಾರಧಾರ ನದಿಯ ಶ್ರೀ ದೇವರ ಜಳಕ ಗುಂಡಿಯ ಮತ್ಸ್ಯತೀರ್ಥಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ವೈಶಿಷ್ಠ್ಯವಾಗಿದೆ.
ಶ್ರೀ ದೇವಳದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೋತ್ಸವ ಆರಂಭವಾದ ನಂತರ ಇಲ್ಲಿಗೆ ಸಮೀಪದ ಯೇನೆಕಲ್ಲಿನ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಪವಿತ್ರ ಕಯದಿಂದ ಮೀನುಗಳು ಕ್ಷೇತ್ರಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಕೊಪ್ಪರಿಗೆ ಇಳಿದು ಜಾತ್ರೆ ಮುಗಿಯುವ ತನಕ ಇಲ್ಲಿ ಹೇರಳವಾಗಿರುವ ದೇವರ ಮೀನುಗಳು ಸ್ವಸ್ಥಾನಕ್ಕೆ ಬಳಿಕ ಮರಳುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರಾ ಮಹೋತ್ಸವದ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟು ಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯ ನಂತರ ಕುಮಾರಧಾರೆಗೆ ಪುರುಷರಾಯ ದೈವವು ಬಂದು ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ನೈವೇದ್ಯ ಸಮರ್ಪಣೆ ಮಾಡುತ್ತದೆ.ಬಳಿಕ ದೇವರ ಮೀನುಗಳು ಸ್ವಸ್ಥಾನ ಸೇರುತ್ತದೆ.ಬಳಿಕ ಮತ್ಸ್ಯತೀರ್ಥದಲ್ಲಿ ಕಡಿಮೆ ಪ್ರಮಾಣದಲ್ಲಿ ದೇವರ ಮೀನುಗಳು ಕಂಡು ಬರುತ್ತದೆ.ಆದರೆ ಜಾತ್ರೆ ವೇಳೆ ಹೇರಳವಾಗಿ ದೇವರ ಮೀನುಗಳು ಕಾಣಸಿಗುತ್ತದೆ.
ಪವಿತ್ರ ಮತ್ಸ್ಯಗಳು:
ಮತ್ಸ್ಯತೀರ್ಥದಲ್ಲಿ ಮೀನುಗಳು ಗುಂಪು ಗುಂಪಾಗಿ ಇರುತ್ತದೆ. ದೇವರ ಮೀನುಗಳನ್ನು ಭಕ್ತರು ಪೂಜಿಸಿ ನೀಡುತ್ತಾರೆ. ದೇವರ ಮೀನುಗಳು ಜಾತ್ರಾ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುವುದು ವಿಶೇಷ. ಗೋಪುರ ನಡಾವಳಿಯ ನಂತರ ಕ್ಷೇತ್ರದ ಪುರುಷರಾಯ ದೈವವು ಕುಮಾರಧಾರೆಗೆ ಬಂದು ಮೀನುಗಳಿಗೆ ಅಕ್ಕಿಯನ್ನು ಆಹಾರವಾಗಿ ನೀಡಿದ ನಂತರ ಇಲ್ಲಿ ಅಧಿಕ ಮೀನುಗಳ ಸಂಖ್ಯೆ ಕಡಿಮೆಯಾಗಿ ಮತ್ತೆ ಮುಂಬರುವ ಜಾತ್ರಾ ಸಮಯದಲ್ಲಿ ಮತ್ತೆ ಬರುತ್ತದೆ.ಈ ಮೀನುಗಳು ಮಳೆಗಾಲದ ಶ್ರಾವಣ ಮಾಸದಲ್ಲಿ ಕುಮಾರಧಾರದ ಉಪನದಿಯಾದ ದರ್ಪಣತೀರ್ಥದಲ್ಲಿ ಶ್ರೀ ದೇವಳದ ಮುಂಭಾಗಕ್ಕೆ ಬರುತ್ತದೆ.ಇದಕ್ಕೆ ಈ ತಿಂಗಳು ಪೂರ್ತಿ ಶ್ರೀ ದೇವರ ನೈವೇಧ್ಯವನ್ನು ಹಾಕಲಾಗುತ್ತದೆ.ಬಳಿಕ ಅದು ಕುಮಾರಧಾರ ನದಿಯ ಇತರ ಭಾಗಕ್ಕೆ ತೆರಳಿ ಜಾತ್ರಾ ವೇಳೆ ಗುಂಪಾಗಿ ಜಳಕದ ಗುಂಡಿಗೆ ಬರುತ್ತದೆ.ಈ ಪವಿತ್ರ ಮತ್ಸ್ಯಗಳಿಗೆ ಶ್ರೀ ದೇವರ ಅವಭೃತ ಸ್ನಾನದ ಮೊದಲು ಅರ್ಚಕರು ಅಕ್ಕಿ ಹಾಕಿ ಆಹಾರ ನೀಡುತ್ತಾರೆ.