ಎಸ್.ಡಿ.ಎಂ. ಪಿಜಿ ಸೆಂಟರ್‌ನ ರಸಾಯನಶಾಸ್ತ್ರ ವಿಭಾಗಕ್ಕೆ ಮೂರು ಪೇಟೆಂಟ್‌ಗಳ ಮನ್ನಣೆ: ಕ್ಷಯ ನಿವಾರಣೆಯ ಹೊಸ ಸಂಶೋಧನೆಗೆ ಅಮೆರಿಕದ ಪೇಟೆಂಟ್

ಎಸ್.ಡಿ.ಎಂ. ಪಿಜಿ ಸೆಂಟರ್‌ನ ರಸಾಯನಶಾಸ್ತ್ರ ವಿಭಾಗಕ್ಕೆ ಮೂರು ಪೇಟೆಂಟ್‌ಗಳ ಮನ್ನಣೆ: ಕ್ಷಯ ನಿವಾರಣೆಯ ಹೊಸ ಸಂಶೋಧನೆಗೆ ಅಮೆರಿಕದ ಪೇಟೆಂಟ್


ಉಜಿರೆ: ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನೆಫಿಸತ್ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಶಶಿಪ್ರಭಾ ನೋವು ನಿವಾರಕ ಔಷಧೀಯ ವೈಜ್ಞಾನಿಕ ಮಾದರಿಗಳನ್ನು ಸಂಶೋಧಿಸಿ ಪ್ರಸಕ್ತ ವರ್ಷ ಅಮೆರಿಕಾದ ಪ್ರತಿಷ್ಠಿತ ಮೂರು ಪೇಟೆಂಟ್‌ಗಳ ಮನ್ನಣೆಗೆ ಪಾತ್ರರಾಗಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ಇಬ್ಬರು ಅಧ್ಯಾಪಕರು ‘ಬೆಂಝಿಲಿಡಿನ್ ಡಿರೈವೇಟಿವ್ಸ್ ಆಫ್ ಫಿನೊಬಾಮ್ಸ್ ಆಸ್ ಆಂಟಿ ಇನ್‌ಫ್ಲಮೇಟರಿ ಏಜೆಂಟ್’ ಕುರಿತು ನಡೆಸಿದ ಸಂಶೋಧನೆಗೆ ಮೊದಲ ಅಮೆರಿಕನ್ ಪೇಟೆಂಟ್ ಪ್ರಾಶಸ್ತ್ಯ ಲಭಿಸಿತ್ತು. ನಂತರ ಕ್ಷಯರೋಗ ನಿವಾರಣೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನೊಳಗೊಂಡ ‘ಆಕ್ಸೋ ಇಮಿಡಜೋಲಿಡಿನ್ ಡಿರೈವಟಿಸ್ ಆಸ್ ಆಂಟಿ ಟ್ಯುಬರ್‌ಕ್ಯುಲಾರ್ ಏಜೆಂಟ್’ ಶೀರ್ಷಿಕೆಯ ಸಂಶೋಧನೆಗೆ ಅಮೇರಿಕನ್ ಪೇಟೆಂಟ್ ಸಿಕ್ಕಿತ್ತು. ಇತ್ತೀಚೆಗೆ ಕ್ಷಯರೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ರಾಸಾಯನಿಕ ಮಾದರಿಯೊಂದನ್ನು ಕಂಡುಹಿಡಿದ ನಂತರ ಅಮೆರಿಕದ ಮೂರನೇ ಪೇಟೆಂಟ್ ಸಿಕ್ಕಿದೆ.


ಮೂರನೇ ಅಮೆರಿಕನ್ ಪೇಟೆಂಟ್‌ಗೆ ಭಾಜನವಾಗಿರುವ ಈ ಸಂಶೋಧನೆಯ ಶೀರ್ಷಿಕೆ ‘ಸಯನೋ ಐಸೋಬ್ಯುಟಾಕ್ಸಿ ಫೀನೈಲ್ ಎನ್-ಸಬ್ಸ್ಟಿಟ್ಯೂಟೆಡ್ ಬೆಂಝಿಲಿಡೀನ್ ಮೀಥೈಲ್ ಥಯಾಝೋಲ್ ಕಾರ್ಬೋಹೈಡ್ರಾಝೈಡ್ಸ್’. ಈ ಸಂಶೋಧನೆಗೆ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಗದೀಶ್ ಪ್ರಸಾದ್ ಡಿ. ಅವರ ಮಾರ್ಗದರ್ಶನವಿತ್ತು.

ಹಿಂದಿನ ಮತ್ತು ಪ್ರಸಕ್ತ ಸಂಶೋಧನಾ ವಿಧಾನದ ಎರಡು ಮಾದರಿಗಳು ಕ್ಷಯರೋಗಕ್ಕೆ ಪ್ರತಿರೋಧವನ್ನು ಒಡ್ಡುವಲ್ಲಿ ಪ್ರಮುಖ ಪಾತ್ರವಹಿಸಲಿವೆ.  ಪ್ರಾಧ್ಯಾಪಕರ ಸಂಶೋಧನೆಗೆ ಸತತವಾಗಿ ಮೂರನೇ ಬಾರಿ ಪೇಟೆಂಟ್ ಲಭಿಸಿರುವುದು ವಿಶೇಷ. ಈ ಸಂಶೋಧನೆಯ ನಿರ್ದಿಷ್ಟ ಫಲಿತಗಳ ಆಧಾರ, ಆವಿಷ್ಕಾರದ ಬಳಕೆ, ಹಕ್ಕು ಮತ್ತು ಮಾರಾಟದ ಹಕ್ಕು ಸ್ವಾಮ್ಯತೆಯು 20 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ.


ಇವರ ಈ ಸಾಧನೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್‌ಚಂದ್ರ ಎಸ್., ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಕಾಲೇಜಿನ ಡೀನ್ ಹಾಗೂ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಪಿ. ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article