‘ದುರಾಭ್ಯಾಸದ ಬದುಕು ನರಕಯಾತನೆ’: ಅನಿಲ್ ಕುಮಾರ್ ಎಸ್.ಎಸ್.
Thursday, December 19, 2024
ಉಜಿರೆ: ಮನುಷ್ಯನಿಗೆ ಯಾವುದೇ ಅಭ್ಯಾಸಗಳು ಮತ್ತು ಹವ್ಯಾಸಗಳು ಒಮ್ಮೆಲೆ ಬರುವುದಿಲ್ಲ. ಒಬ್ಬ ವ್ಯಕ್ತಿ ಯಾವ ವಿಷಯದ ಬಗ್ಗೆ ಚಿಂತನೆ ಮಾಡುತ್ತಾನೋ ಅದೇ ವಿಷಯದಲ್ಲಿ ಮಗ್ನನಾದರೆ ಬೇರೆ ಬೇರೆ ಆಲೋಚನೆಗಳು ಹುಟ್ಟುತ್ತವೆ. ದುರಭ್ಯಾಸ ಸುಲಭವಾಗಿ ಮನುಷ್ಯನಲ್ಲಿ ಸೇರಿಕೊಳ್ಳುತ್ತದೆ. ಆದರೆ ಅದು ಸುಲಭವಾಗಿ ಬಿಟ್ಟುಹೋಗುವುದಿಲ್ಲ. ದುರಾಭ್ಯಾಸದಿಂದ ಬದುಕಿನಲ್ಲಿ ನರಕಯಾತನೆ ಅನುಭವಿಸುವುದಕ್ಕಿಂತ ಅದನ್ನು ಬೇರು ಸಮೇತವಾಗಿ ತ್ಯಜಿಸಿದಲ್ಲಿ ಮಾತ್ರ ಕಾಯಿಲೆ ಗುಣವಾಗುತ್ತದೆ. ಮದ್ಯಪಾನವೆಂಬ ದುಶ್ಚಟವನ್ನು ಮದ್ಯವರ್ಜನ ಶಿಬಿರದ ಮೂಲಕ ಬೇರು ಸಮೇತ ತೆಗೆಯುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವಿಭಾಗದಿಂದ ನಡೆಯುತ್ತಿದೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.
ಉಜಿರೆ ಲಾಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿದ್ದ 237ನೇ ವಿಶೇಷ ಮದ್ಯವರ್ಜನ ಶಿಬಿರದ ಸಂದರ್ಭದಲ್ಲಿ ಆಗಮಿಸಿ ಸಮಾರೋಪ ಸಮಾರಂಭ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಎಂದು ತಿಳಿಸಿದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 75 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಟುಂಬದಿನ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್ರವರು ನೆರವೇರಿಸಿಕೊಟ್ಟರು. ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಾಗೇಂದ್ರ ಹೆಚ್.ಎಸ್., ರಮೇಶ್, ಆರೋಗ್ಯ ಸಹಾಯಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.