
ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆ ಸಮುದ್ರ ಪಾಲಾಗಿ ಸಾವು
Monday, December 16, 2024
ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ಸಂಭವಿಸಿದೆ.
ದೇರೆಬೈಲ್ ನ ದಿವಂಗತ ಜಗದೀಶ್ ಭಂಡಾರಿ ಅವರ ಪತ್ನಿ ಉಷಾ (72) ಮೃತ ಮಹಿಳೆ.
ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲವು ದಿನಗಳ ಹಿಂದೆ ನಿಧನರಾಗಿದ್ದು ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಜೊತೆಗೆ ಸೋಮೇಶ್ವರಕ್ಕೆ ಆಗಮಿಸಿದ್ದರು. ಪಿಂಡಪ್ರದಾನದ ಬಳಿಕ ಸಮುದ್ರದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ.
ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು ಸಮುದ್ರ ತಟಕ್ಕೆ ತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಉಷಾ ಅವರು ಎನ್.ಎಂ.ಪಿ.ಟಿ.ಯಲ್ಲಿ ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಉಷಾ ಅವರಿಗೆ ಮಗಳಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.