ರಸ್ತೆ ಗುಂಡಿಗೆ ತೇಪೆ ಕಾರ್ಯ: ಸಂಚಾರ ವ್ಯತ್ಯಯ
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೆರತ್ರಾವತಿ ಸೇತುವೆಯಲ್ಲಿ ಹೆದ್ದಾರಿ ಗುಂಡಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸೇತುವೆಗೆ ತೇಪೆ ಹಚ್ಚುವ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದ್ದು, ವಾಹನ ಚಾಲಕರು, ಆಂಬುಲೆನ್ಸ್ ಸೇರಿದಂತೆ ಮಂಗಳೂರು ಕಡೆ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಗಿದ್ದು, ಸುಮಾರು 2 ಕಿ.ಮೀ.ವರೆಗೆ ವಾಹನಗಳು ಸರತಿ ಸಾಲಿನಲ್ಲಿ ಸಂಚರಿಸುಂತಾಯಿತು.
ಪೀಕ್ ಅವರ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆಯ ರಸ್ತೆಗೆ ತೇಪೆ ಕಾರ್ಯ ನಡೆಸಿದ್ದರಿಂದ ಕರ್ನಾಟಕದ-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವ್ಯತ್ಯಯವಾಯಿತು.
ಕೇರಳದಿಂದ ಮಂಗಳೂರಿಗೆ ಬರುವ ಹಲವು ಅಂಬ್ಯುಲೆನ್ಸ್ ಗಳು ಟ್ರಾಫಿಕ್ ಜಾಂನಲ್ಲಿ ಸಿಲುಕಿ ಹಲವು ರೋಗಿಗಳಿಗೆ ಸಮಸ್ಯೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರ ಸಂಸ್ಥೆಗೆ ಹಗಲು ಮತ್ತು ಪೀಕ್ ಅವರ್ನಲ್ಲಿ ಕಾಮಗಾರಿಗೆ ಅನುಮತಿ ನೀಡಿರುವುದು ಸಮಸ್ಯೆಗೆ ಕಾರಣವಾಗಿದ್ದು, ಒಂದು ಬದಿಯ ಹೆದ್ದಾರಿ ಮುಚ್ಚಿ ಒಂದು ಬದಿಯಲ್ಲೇ ವಾಹನಗಳ ಸಂಚಾರಕ್ಕೆ ದ.ಕ. ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದ್ದರೆ ಈ ಸಮಸ್ಯೆ ಬಗೆಹರಿಯುತ್ತಿತ್ತು. ಜಿಲ್ಲಾಡಳಿತದ ಬೇಜಬ್ದಾರಿಯಿಂದ ಕಳೆದೆರಡು ದಿನಗಳಿಂದ ಪ್ರಯಾಣಿಕರು ಪರದಾಡುವಂತಾಯಿತು.
ಸಂಚಾರ ಅವ್ಯವಸ್ಥೆಯಿಂದ ಉದ್ಯೋಗ, ಕಾಲೇಜು, ಶಾಲೆಗಳಿಗೆ ತೆರಳುವವರು ಹಲವು ಗಂಟೆಗಳಿಂದ ರಸ್ತೆಯಲ್ಲೇ ಬಾಕಿಯಾಗುವ ಸ್ಥಿತಿ ನಿರ್ಮಾಣವಾಯಿತು. ಬಸ್, ಲಾರಿ, ಕಾರುಗಳು ಸೇರಿದಂತೆ ಘನ ವಾಹನಗಳು ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಕಾಪಿಕಾಡುವರೆಗೆ ಹೆದ್ದಾರಿಯಲ್ಲೇ ಬಾಕಿ ಉಳಿಯುವಂತಾಯಿತು.