
ಗ್ಯಾಸ್ ಸೋರಿಕೆ: ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಾಲಕಿ ಮೃತ್ಯು
ಉಳ್ಳಾಲ: ಗ್ಯಾಸ್ ಸೋರಿಕೆ ಪರಿಣಾಮ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ ಒಬ್ಬಾಕೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಝುಲೇಕಾ ಮೆಅದಿಯಾ ಎಂದು ಗುರುತಿಸಲಾಗಿದೆ.
ಈಕೆ ಮೊಂಟೆಪದವು ಶಾಲೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆಗಿದ್ದಳು. ಡಿ.8 ರಂದು ಖಂಡಿಕ ನಿವಾಸಿ ಮುತ್ತಲಿಬ್ ಅವರ ಮನೆಯಲ್ಲಿ ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಕೊಠಡಿಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಈ ಘಟನೆಯಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಈ ಸಂದರ್ಭದಲ್ಲಿ ತಾಯಿ ಕುಬ್ರಾ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪೈಕಿ ತಾಯಿ ಖುಬ್ರಾ ಡಿ.13 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮೂವರು ಮಕ್ಕಳ ಪೈಕಿ ಹಿರಿಯ ಮಗಳು ಝುಲೇಕ ಮೆಅದಿಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಮಕ್ಕಳಾದ ಮಝಿಯಾ, ಮಾಯಿದಾ ಅವರಿಗೆ ಚಿಕಿತ್ಸೆ ಮುಂದುವರಿದಿದೆ.