
ಗ್ಯಾಸ್ ದುರಂತಕ್ಕೆ ಮತ್ತೋರ್ವ ಬಾಲಕಿ ಮೃತ್ಯು: ಮೃತರ ಸಂಖ್ಯೆ ಮೂರಕ್ಕೆ
ಉಳ್ಳಾಲ: ಗ್ಯಾಸ್ ಸೋರಿಕೆ ಪರಿಣಾಮ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ (9) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 8ರಂದು ಮಂಜನಾಡಿ ಗ್ರಾಮದ ಖಂಡಿಕ ನಿವಾಸಿಯಾಗಿದ್ದ ಮುತ್ತಲಿಬ್ ಅವರ ಮನೆಯಲ್ಲಿ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟ ಸಂಭವಿಸಿತ್ತು. ಈ ಸಂದರ್ಭ ಮುತ್ತಲಿಬ್ ಅವರ ಪತ್ನಿ ಖುಬ್ರಾ ಮತ್ತು ಮಕ್ಕಳಾದ ಮೆಅದಿಯಾ, ಮಾಝಿಯಾ ಮತ್ತು ಮಾಯಿದಾ ಕೊಠಡಿಯಲ್ಲಿ ಮಲಗಿದ್ದರು. ಸ್ಪೋಟದ ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಘಟನೆಯಲ್ಲಿ ನಾಲ್ವರೂ ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುತ್ತಲಿಬ್ ಅವರ ಪತ್ನಿ ಖುಬ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಮೃತಪಟ್ಟಿದ್ದರು. ಕಳೆದ ಗುರುವಾರ ಹಿರಿಯ ಮಗಳು ಝುಲೇಕ ಮೆಅದಿಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಮಾಯಿದಾ ಚಿಕಿತ್ಸೆಗೆ ಸ್ಪಂದಿಸಿ ಗುರುವಾರ ಬಿಡುಗಡೆ ಆಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಿಯ ಪುತ್ರಿ ಫಾತಿಮತ್ ಮಾಯಿಝ ಶನಿವಾರ ಮೃತಪಟ್ಟಿದ್ದಾಳೆ. ಈ ಮೊಂಟೆ ಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಆಗಿದ್ದಳು.
ಗಾಯಾಳು ನಾಲ್ವರ ಪೈಕಿ ಬಾಲಕಿ ಮಾಯಿದಾ ಮಾತ್ರ ಬದುಕುಳಿದಿದ್ದು, ಆಕೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಅಜ್ಜಿ ಮನೆಗೆ ತೆರಳಿದ್ದಾಳೆ.