
ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬೆಂಗಳೂರಿನ ವ್ಯಕ್ತಿ
ಉಳ್ಳಾಲ: ಉಳ್ಳಾಲ ಸಮುದ್ರ ಕಿನಾರೆಗೆ ತೆರಳಿದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಳಿ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರು ಶಿವಾಜಿ ನಗರ ಮೂಲದ ಸಜ್ಜಾದ್ ಅಲಿ(45) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಬೆಂಗಳೂರು ಮೂಲದ 11 ಮಂದಿಯ ಕುಟುಂಬ ಸುತ್ತಾಡುತ್ತಾ ಭಾನುವಾರ ಮಂಗಳೂರಿಗೆ ತಲುಪಿದ್ದರು. ಭಾನುವಾರ ಉಳ್ಳಾಲ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಸೋಮೇಶ್ವರ ಬೀಚ್‌ಗೆ ತೆರಳಿದ್ದಾರೆ. ಈ ವೇಳೆ ಸಜ್ಜಾದ್ ಅವರ ಸಹೋದರನ ಮಗಳು ನೀರು ಪಾಲಾಗಿದ್ದು, ಆಕೆಯನ್ನು ರಕ್ಷಣೆ ಮಾಡಲು ಸಜ್ಜಾದ್ ಅಲಿ ತೆರಳಿದ್ದು, ಈ ವೇಳೆ ಅವರು ಸಮುದ್ರ ಪಾಲಾಗಿ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಅವರನ್ನು ಮೇಲಕ್ಕೆತ್ತಿದ ಕುಟುಂಬಸ್ಥರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.