ಪೋನ್ ಕರೆ ಸ್ವೀಕರಿಸಿ, ದುಡ್ಡು ಕಳಕೊಂಡರು
ಉಪ್ಪಿನಂಗಡಿ: ಸೈಬರ್ ವಂಚನಾ ಜಾಲದ ಮೂಲಕ ಹಣ ದೋಚುವ ವಂಚಕರ ವಿರುದ್ಧ ಅದೆಷ್ಟು ಮುನ್ನೆಚ್ಚರಿಕೆ ವಹಿಸಿದರೂ, ಅವರು ಹೊಸ ಹೊಸ ವಂಚನಾ ಅವಿಷ್ಕಾರವನ್ನು ಮಾಡುತ್ತಲೇ ಇದ್ದಾರೆ. ಇಂತಹ ವಂಚಕರಿಂದಾಗಿ ಉಪ್ಪಿನಂಗಡಿಯ ವ್ಯಕ್ತಿಯೋರ್ವರು ಒಂದು ದೂರವಾಣಿ ಕರೆ ಸ್ವೀಕರಿಸಿದ ಕೂಡಲೇ ಅವರ ಖಾತೆಯಲ್ಲಿದ್ದ ಹಣ ವರ್ಗಾವಣೆಗೆ ಒಳಗಾಗಿರುವ ಪ್ರಕರಣ ನಡೆದಿದೆ.
ಇಲ್ಲಿನ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಗುರುವಾರ ಬೆಳಗ್ಗೆ ಫೋನ್ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಯಾವುದೇ ಮಾತುಕತೆ ಮಾಡದೆ ಫೋನ್ ಕರೆ ಕಡಿತಗೊಂಡಿತ್ತು. ಈ ವೇಳೆ ಇದು ಯಾರ ನಂಬರ್ ಎಂದು ಅವರು ಟ್ರೂ ಕಾಲರ್ ಮೂಲಕ ಕರೆಯ ಮೂಲವನ್ನು ಶೋಧಿಸಿದಾಗ ಅಲ್ಲಿ ‘ಲೈಕ್ಲೀ ಫ್ರಾಡ್’ ಎಂಬುದು ಕಂಡು ಬಂದಿದೆ. ತಕ್ಷಣವೇ ವಂಚನೆಯ ಸಂಶಯಪಟ್ಟ ಅವರು ತನ್ನ ಫೋನ್ ಸಂದೇಶ ಪರಿಶೀಲಿಸಿದಾಗ ಆ ಫೋನ್ ನಂಬರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ 161 ರೂ. ಹಾಗೂ 14,839 ರೂ. ಅಟೋ ಪೇ ಆಗಿದೆ ಎಂಬ ಸಂದೇಶ ಬಂದಿತ್ತು. ಕಳವಳಕ್ಕೀಡಾದ ಅವರು, ಐಪಿಪಿಬಿ ಖಾತೆಯ ಬಗ್ಗೆ ಇಲಾಖಾಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಈ ಅಟೋ ಪೇ ಯಲ್ಲಿ 161 ರೂ. ವರ್ಗಾವಣೆಗೊಂಡಿದ್ದು, 14,839 ರೂ. ಸಮರ್ಪಕ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದೆ ಎಂಬ ಮಾಹಿತಿ ದೊರಕಿತು. ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಅವರಿಗೆ ಬಂದಿದ್ದು, ಆ ವೇಳೆ ಜಾಗೃತ ಗೊಂಡಿದ್ದ ಪರಿಣಾಮ ಅವರು ಕರೆ ಸ್ವೀಕರಿಸಲಿಲ್ಲ ಎಂದು ತಿಳಿದು ಬಂದಿದೆ.