
ಮತೀಯ ಭಾವನೆಯನ್ನು ಮನಸ್ಸಿನಿಂದ ದೂರವಿಟ್ಟು ಸೌಹಾರ್ದ ಬದುಕು ಅನಿವಾರ್ಯತೆ ಇದೆ: ಬಿ. ರಮಾನಾಥ ರೈ
ಅಡ್ಡೂರು: ಮತೀಯ ಭಾವನೆಯನ್ನು ಮನಸ್ಸಿನಿಂದ ದೂರವಿಟ್ಟು ಸೌಹಾರ್ದ ಬದುಕು ಅನಿವಾರ್ಯತೆ ಇದೆ. ತಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಮತ್ತೊಂದು ಧರ್ಮಕ್ಕೆ ಗೌರವ ನೀಡುವ ಮೂಲಕ ಪ್ರೀತಿಯ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಯುವಕರ ಮೇಲಿದೆ. ಜನರ ಮಧ್ಯೆ ಪರಸ್ಪರ ಕಲಹ ಉಂಟಾಗಿ ನಿಯಂತ್ರಣಕ್ಕೆ ಬಾರದೇ ಉಲ್ಬಣ ಸ್ಥಿತಿಗೆ ತಲುಪಿದರೆ ಸಮಾಜ ಉಳಿಯಲು ಸಾಧ್ಯವಿಲ್ಲ. ಘರ್ಷಣೆಯಿಂದ ಬದುಕಲು ಕಟ್ಟಿಕೊಳ್ಳಲು ಆಗುವುದಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ರೋಝ್ ಫ್ರೆಂಡ್ಸ್ ಕ್ಲಬ್ (ರಿ.) ಕಳಸಗುರಿ ಸಂಸ್ಥೆಯ 30ನೇ ವಾರ್ಷಿಕೋತ್ಸವ ಪ್ರಯುಕ್ತ ಸೌಹಾರ್ದ ಸಂಗಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಇಲ್ಲಿನ ಕಳಸಗುರಿ ಮೈದಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ರೀಡೆ ಮನುಷ್ಯ ಮನುಷ್ಯನ ಮಧ್ಯೆ ಸಂಬಂಧವನ್ನು ಹೆಚ್ಚು ಮಾಡುತ್ತದೆ. ಸಮಾಜದಲ್ಲಿ ಅಪನಂಬಿಕೆ, ಅವಿಶ್ವಾಸ ಹೆಚ್ಚಿರುವ ಕಾಲ ಘಟ್ಟದಲ್ಲಿ ನಾವೆಲ್ಲರೂ ಸೌಹಾರ್ದತೆಗೆ ಒತ್ತು ನೀಡಿ ಉಳಿಸುವ ಕಾರ್ಯ ಮಾಡಬೇಕು. ದೇಶದಲ್ಲಿ ಎಲ್ಲರೂ ಸೌಹಾರ್ದೆತೆಯಲ್ಲಿರಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಭೀಕರ ಪರಿಸ್ಥಿಯನ್ನು ಎದುರಿಸುವ ಸಂದರ್ಭ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಗಂದಾಡಿ ಸೋಮನಾಥೇಶ್ವರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ, ಮಾಜಿ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ, ಆಂಬ್ಯುಲೆನ್ಸ್ ಚಾಲಕರಾದ ಹಬೀಬ್ ಸಲ್ಲಾಜೆ, ಫರಾನ್ ಹಾಗೂ ರಾಜ್ಯ ಮಟ್ಟದ ರೋಪ್ ಸ್ಪರ್ಧೆಗೆ ಆಯ್ಕೆಗೊಂಡಿರುವ ಅಡ್ಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಡ್ಡೂರು ಸೆಂಟ್ರಲ್ ಕಮಿಟಿ, ಫೈವ್ ಸ್ಟಾರ್ ಅಡ್ಡೂರು, ಎಫ್.ಸಿ.ಕೆ ಕೆಳಗಿಕರೆ ಸಂಸ್ಥೆಗೆ ‘ಗ್ಲೋಬಲ್ ಅವಾರ್ಡ್-2025’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಹಾಜಿ ಎಂ.ಎಚ್. ಹಾಜಿ ಮೊಹಿಯುದ್ದೀನ್ ಉದ್ಘಾಟಿಸಿದರು. ಆರ್.ಎಫ್.ಸಿ ಗೌರವಾಧ್ಯಕ್ಷ ಜಬ್ಬಾರ್ ಕಳಸಗುರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಎಸ್. ಇಸ್ಮಾಯೀಲ್, ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ದಾವೂದ್ ಬಂಗ್ಲಗುಡ್ಡೆ, ಸದಸ್ಯರಾದ ಎ.ಕೆ. ಅಶ್ರಫ್, ಎ.ಕೆ. ರಿಯಾಝ್, ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಡಾ. ಇ.ಕೆ.ಇ. ಸಿದ್ದೀಕ್, ಹಸನ್ ಬಾವ, ಆರ್.ಎಫ್.ಸಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಳಸಗುರಿ, ಪುತ್ತೂರು ಆದರ್ಶ್ ಫರ್ನಿಚರ್ಸ್ ಮಾಲಕ ಅಬ್ದುರ್ರಹ್ಮಾನ್, ಸದಸ್ಯರ, ಚಿದಾನಂದ ನಂದ್ಯ, ಎ.ಕೆ.ಹಾರಿಸ್, ಶೇಖ್ ಮೋನು, ಇಬ್ರಾಹೀಂ ಬೊಟ್ಟಿಕೆರೆ, ನೌಫಲ್ ಕೋಡಿಬೆಟ್ಟು, ಆದಂ ಕಳಸಗುರಿ ಮತ್ತಿತರರು ಉಪಸ್ಥಿತರಿದ್ದರು.