
ಚರಂಡಿಗೆ ಬಿದ್ದ ಟ್ಯಾಂಕರ್: ಟ್ರಾಫಿಕ್ ಜಾಮ್
Tuesday, January 14, 2025
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಡೀಸೆಲ್ ಟ್ಯಾಂಕರ್ ಮಂಗಳವಾರ ದಾರಿ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ, ಡೀಸೆಲ್ ಸೋರಿಕೆಉಂಟಾಗಿ ಒಂದಷ್ಟು ಸಮಯ ಪರಿಸರದಲ್ಲಿ ಆತಂಕಿತ ವಾತಾವರಣ ಉಂಟಾಯಿತಲ್ಲದೆ, ಕೆಲ ಗಂಟೆಗಳ ಕಾಲ ಕಲ್ಲಡ್ಕದಿಂದ ಮೆಲ್ಕಾರ್ ವರೆಗೂ ಟ್ರಾಫಿಕ್ ಜಾಮ್‌ಗೂ ಕಾರಣವಾಯಿತು.
ಈ ಘಟನೆಯಿಂದ ಟ್ಯಾಂಕರ್ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ. ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ವಾಹನಗಳು ಬದಲಿ ರಸ್ತೆಯಾದ ದಾಸಕೋಡಿ ಮೂಲಕ ನರಿಕೊಂಬು ಮಾರ್ಗವಾಗಿ ಬಿ.ಸಿ. ರೋಡಿನತ್ತ ಸಂಚರಿಸಿದವು.
ಮಂಗಳೂರಿನಿಂದ ಚೆನ್ನೈಗೆ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಚಾಲಕ ಕಲ್ಲಡ್ಕ ಸರ್ವೀಸ್ ರಸ್ತೆಯಲ್ಲಿ ಸಂಚಾರದ ವೇಳೆ ಎಡವಟ್ಟ ಮಾಡಿಕೊಂಡು ಚರಂಡಿಗೆ ಪಲ್ಟಿಯಾಗಿದೆ. ಈ ಸಂದರ್ಭ ಡೀಸೆಲ್ ಟ್ಯಾಂಕ್‌ನಲ್ಲಿ ಸಣ್ಣ ಪ್ರಮಾಣದ ತೂತು ಆಗಿದ್ದು, ಇದರಿಂದ ಡಿಸೇಲ್ ಸೋರಿಕೆ ಕಂಡುಬಂದಿದೆ. ಹಾಗಾಗಿ ಕೆಲ ಹೊತ್ತು ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು.
ಜೊತೆಗೆ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಮೊದಲೇ ವಾಹನಗಳು ಸಂಚಾರ ದುಸ್ಥರವಾಗಿದ್ದು, ಇದೀಗ ಟ್ಯಾಂಕರ್ ಪಲ್ಟಿಯಿಂದ ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.