
ಪತ್ರಿಕೆ ಖರೀದಿಸುವವರ ಸಂಖ್ಯೆ ಇಳಿಕೆ: ಬಂಟ್ವಾಳ ತಾ. 23ನೇ ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ಖೇದ
ಬಂಟ್ವಾಳ: ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು ಕೊನೆಗಾಲದ ದಿನಗಳನ್ನು ಎಣಿಸುವಂತಾಗಿದೆ ಎಂದು ಬಂಟ್ವಾಳತಾಲೂಕು ೨೩ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಎಳೆಯರ ಗೆಳೆಯ ಖ್ಯಾತಿಯ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ಖೇದ ವ್ಯಕ್ತಪಡಿಸಿದ್ದಾರೆ.
ಮಂಚಿ-ಕೊಳ್ಳಾಡು ಸರಕಾರಿ ಪ್ರೌಢಶಾಲೆಯಲ್ಲಿ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೆಗಳ ಜೀವಾಳವಾಗಿರುವ ಜಾಹೀರಾತು ನೀಡುವವರಿಲ್ಲ, ಓದುಗರ, ಪತ್ರಿಕೆ ಖರೀದಿಸುವವರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತಿದೆ. ಪತ್ರಿಕೆಗೆ ಬರೆಯುವವರೂ ಇಲ್ಲದಾಗಿರುವ ಪರಿಣಾಮ ಶಿಶು ಸಾಹಿತ್ಯ, ಸಾಪ್ತಾಹಿಕ ಸಂಪದ ಮೊದಲಾದ ಪತ್ರಿಕೆಗಳ ವಿಶೇಷಾಂಕಗಳು, ಓದುಗರ-ಬರೆಯುವವರ ಅಂಕಣಗಳು ಮರೆಯಾಗಿದೆ. ಯಾವ ಕಾಲಕ್ಕೆ ಯಾವ ಪತ್ರಿಕೆ ನಿಲ್ಲುತ್ತದೆ ಎಂಬುದನ್ನು ಹೇಳಲಾಗದ ಸ್ಥಿತಿ ಇದೆ ಎಂದರು.
ಪುಸ್ತಕ, ಪತ್ರಿಕೆ ಓದುವವರಿಲ್ಲದೆ ಸಾಹಿತ್ಯ ಸೊರಗುತ್ತಿದೆ ಸಾಹಿತಿಗಳ ಸಾಹಿತ್ಯ ಜನರ ಬದುಕಿನಿಂದ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಾಹಿತ್ಯ ನನಗೆ ಸಾಕಷ್ಟು ಕೊಟ್ಟಿದೆ. ಅದಕ್ಕಾಗಿ ನಾನು ಕಣ್ಣು ಮುಚ್ಚಿದರೂ ಸಾಹಿತ್ಯ ಕ್ಷೇತ್ರಕ್ಕೆ ನನ್ನ ಕೊಡುಗೆ ಸದಾ ಶಾಶ್ವತವಾಗಿರಬೇಕು. ಅದುವೇ ನಾನು ಸಾಹಿತ್ಯ ಕ್ಷೇತ್ರಕ್ಕೆ ಕೊಡಬಲ್ಲ ದೊಡ್ಡ ಕೊಡುಗೆ ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಬಿಲ್ಲಂಪದವು ಮಹಾಲಿಂಗ ಭಟ್, ಬಂಟ್ವಾಳ ಕಸಾಪ ಮಾಜಿ ಅಧ್ಯಕ್ಷ ಉದಯ ಶಂಕರ್ ನೀರ್ಪಾಜೆ, ತುಂಬೆ ಪದವಿಪೂರ್ವ ಕಾಲೇಜು ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ, ಕನ್ನಡ-ತುಳು ಕವಿ ಚೆನ್ನಪ್ಪ ಅಳಿಕೆ ಅವರು ಸಂವಾದ ನಡೆಸಿದರು.
ಗುಬ್ಬ ಶ್ರೀಧರ್, ಚಂದ್ರಹಾಸ ರೈ ಬಾಲಜಿಬೈಲು, ಬಿ ಎಂ ಅಬ್ಬಾಸ್ ಅಲಿ, ಜನಾರ್ದನ ಅಮ್ಮುಂಜೆ ಅವರು ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಉಮರ್ ಮಂಚಿ ವಂದಿಸಿ, ಉಮ್ಮರ್ ಕುಂಞ ಸಾಲೆತ್ತೂರು ನಿರ್ವಹಿಸಿದರು. ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಉಮರ್ ಮಂಚಿ ವಂದಿಸಿ, ಉಮ್ಮರ್ ಕುಂಞ ಸಾಲೆತ್ತೂರು ನಿರ್ವಹಿಸಿದರು.
ಗಮಕವಾಚನ:
ಇದಕ್ಕೂ ಮೊದಲು ಡಾ ವಾರಿಜ ನಿರ್ಬೈಲು ಅವರಿಂದ ಗಮಕ ವಾಚನ ಕಾರ್ಯಕ್ರಮ ನಡೆಯಿತು. ತುಳಸಿ ಕೈರಂಗಳ ನಿರೂಪಿಸಿದರು. ರೂಪಾಶ್ರೀ ಮೋಂತಿಮಾರು ವಂದಿಸಿ, ಜಗನ್ನಾಥ ಪುರುಷ ಮಂಚಿ ನಿರ್ವಹಿಸಿದರು. ಪೊಳಲಿ-ಬೊಕ್ಕಸ ಶಿವರಂಜಿನಿ ಕಲಾ ಕೇಂದ್ರದಿಂದ ಶಿವರಂಜಿನಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ವಿದುಷಿ ಶ್ಯಾಮಲಾ ಸುರೇಶ್ ಹಾಗೂ ತಂಡದ ನೇತೃತ್ವದ ಕುಂಟೂರು ಮಿತ್ರ ಬಳಗದಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನದ ಬಳಿಕ ಕವಿಗೋಷ್ಠಿ-ವಾಚನ, ಗಾಯನ, ಕುಂಚ ಗೋಷ್ಠಿಗಳು ಅನಿತಾ ನರೇಶ್ ಮಂಚಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಕೃಷಿ ಮತ್ತು ಸಾಹಿತ್ಯ ಎಂಬ ವಿಷಯದ ಬಗ್ಗೆ ಸಂಕಪ್ಪ ಶೆಟ್ಟಿ ಸಂಚಯಗಿರಿ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ ನಡೆಯಿತು. ಮಂಚಿ-ಕೊಳ್ನಾಡು ಸ.ಪ್ರೌ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ಜರಗಿತು.
ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಾಹಿತ್ಯದಲ್ಲಿ ಒತ್ತಡ ನಿರ್ವಹಣೆ ವಿಷಯದ ಬಗ್ಗೆ ಡಾ.ವೀಣಾ ತೋಳ್ಪಾಡಿ, ನಾಡು-ನುಡಿ-ಸಂಸ್ಕೃತಿಗೆ ಮಂಚಿಯ ಕೊಡುಗೆ ವಿಷಯದ ಬಗ್ಗೆ ಅನುಸೂಯ ಸಾಲೆತ್ತೂರು ಅವರು ಉಪನ್ಯಾಸಗೈದರು.
ಇದೇ ವೇಳೆ ಗಣ್ಯರ ಉಪಸ್ಥಿತಿಯಲ್ಲಿ ಸಂಘ ಸಂಸ್ಥೆಗಳಾದ ಯುವಕ ಮಂಡಲ ಇರಾ, ಸ್ನೇಹ ಮಿಲನ ಕಲ್ಲಡ್ಕ,ಡಿವೈನ್ ಸ್ಟಾರ್ ಕ್ರೀಡಾ ಹಾಗೂ ಕಲಾಸಂಘ ಪಾಣಾಜೆಕೋಡಿ, ಲಯನ್ಸ್ ಕ್ಲಬ್ ಬಂಟ್ವಾಳ, ಐ.ಸಿ.ವೈ.ಎಂ. ಮೊಗರ್ನಾಡ್ ಚಚ್೯ ಅವರಿಗೆ ಬಪುರಸದಕಾರವನ್ನಿತ್ತು ಗೌರವಿಸಲಾಯಿತು.
ಬಂಟ್ವಾಳ ತಾ.ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪದಾಧಿಕಾರಿಗಳಾದ ವಿ.ಸು. ಭಟ್, ರಮಾನಂದ ನೂಜಿಪಾಡಿ, ಡಿ.ಬಿ. ಅಬ್ದುಲ್ ರಹಿಮಾನ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ-ಬಾಳಿಕೆ, ಪ್ರ.ಕಾರ್ಯದರ್ಶಿ ಎಂ.ಡಿ. ಮಂಚಿ, ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ, ಅಬ್ಬಾಸ್ ಆಲಿ ಬಿ.ಎಂ. ಮೊದಲಾದವರಿದ್ದರು.