
ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಕ್ಯಾ. ಚೌಟ
ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು,ನಾಚಿಕೆ, ಮಾನ,ಮರ್ಯಾದೆ ಬಿಟ್ಟು ಆಡಳಿತ ನಡೆಸುತ್ತಿದೆ ಎಂದು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಟೀಕಾ ಪ್ರಹಾರಗೈದಿದ್ದಾರೆ.
ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಗುರುವಾರ ನಡೆದ ಬಿಜೆಪಿ ಬಂಟ್ವಾಳ ಮಂಡಲಕ್ಕೆ ಮರು ಆಯ್ಕೆಯಾದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮತ್ತವರ ತಂಡದ ಪದ ಸ್ವೀಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಸರಕಾರದಿಂದ ಒಂದುವರ್ಗದ ಒಲೈಕೆ ರಾಜಕಾರಣಕ್ಕೆ ಕರ್ನಾಟಕದಲ್ಲಿ ಗೋವಿಗೂ ರಕ್ಷಣೆ ಇಲ್ಲದಂತಾಗಿದ್ದು, ಗೋಮಾತೆಯ ಕೆಚ್ಚಲನ್ನೇ ಕತ್ತರಿಸುವಂತ ನೀಚ,ಅಮಾನವೀಯ ಕೃತ್ಯ ನಡೆಯುತ್ತಿರುವುದು ಖಂಡನೀಯವಾಗಿದೆ.ಈ ಕೃತ್ಯದ ಆರೋಪಿಗಳನ್ನು ರಕ್ಷಿಸುವ ಕಾರ್ಯ ಕಾಂಗ್ರೆಸ್ ಸರಕಾರದಿಂದಾಗುತ್ತಿದೆ ಎಂದು ಆರೋಪಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಿಜೆಪಿಯ ಸಂಘಟಿತ ಹೋರಾಟದಿಂದ ಬಂಟ್ವಾಳದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂಬುದನ್ನು ಹಲವು ಚುನಾವಣೆಗಳು ತೋರಿಸಿಕೊಟ್ಟಿದೆ. ಹಾಗಾಗಿ ಪ್ರತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರಲ್ಲದೆ ಇದೀಗ ಸಹಕಾರಿ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಅತ್ಯತ್ತುಮ ಸಾಧನೆ ಮಾಡಿದ್ದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಅಭಿನಂದಿಸಿದರು.
ಇದೇ ವೇಳೆ ಬಿಜೆಪಿ ಬಂಟ್ವಾಳ ಮಂಡಲದ ನೂತನ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಅಭಿವೃದ್ದಿ ಮತ್ತು ಬದ್ದತೆಯಲ್ಲಿ ಆಡಳಿತ ನಡೆಸುವ ಕೇಂದ್ರ ಸರಕಾರದ ಜನಪರವಾದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ,ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ ತುಂಬುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ತಿಳಿಸಿದರಲ್ಲದೆ ತನ್ನ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು ಹಾಗೂಮುಖಂಡರಿಗೆ ಅಭಿನಂದನೆ ಸಲ್ಲಿಸಿದರು
ಬಿಜೆಪಿ ಜಿಲ್ಲಾಧ್ಯಧ್ಯಕ್ಷ ಸತೀಶ್ ಕುಂಪಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ನಾಯಕ ವಿಕಾಸ್ ಪುತ್ತೂರು ಅಭಿನಂದನಾ ಭಾಷಣ ಗೈದರು.
ನೂತನವಾಗಿ ಪದ ಸ್ವೀಕರಿಸಿದ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿದರು.
ಪಕ್ಷದ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಅಪ್ಪಯ್ಯ ಮಣಿಯಾಣಿ ,ಪ್ರೇಮಾನಂದ ಶೆಟ್ಟಿ, ರಾಧಾಕೃಷ್ಣ ಆಳ್ವ ಸಾಜ, ಪೂಜಾ ಪೈ, ಯತೀಶ್ ಅರ್ವಾರ್ , ಪ್ರಭಾಕರಪ್ರಭು,ಜನಾರ್ದನ ಬೊಂಡಾಲ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸುದರ್ಶನ ಬಜ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.