
ಸಂತ ಫಿಲೋಮಿನಾ ಕಾಲೇಜಿನ ಐಐಸಿ ಘಟಕಕ್ಕೆ ‘ಥ್ರೀ ಸ್ಟಾರ್ ರೇಟಿಂಗ್’
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಷನ್ಸ್ ಇನ್ನೊವೇಶನ್ ಕೌನ್ಸಿಲ್ ಘಟಕವು ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಪ್ರಶಂಸನೀಯ ಸಾಧನೆಗೈದಿದೆ. 2023-24ನೇ ಶೈಕ್ಷಣಿಕ ವರ್ಷದಲ್ಲಿ ಮಾಡಿದ ಈ ಸಾಧನೆಗೆ ಭಾರತ ಸರಕಾರದ ಶಿಕ್ಷಣ ಸಚಿವಾಲಯವು ‘ಥ್ರೀ ಸ್ಟಾರ್ ರೇಟಿಂಗ್’ ಅನ್ನು ಕೊಡಮಾಡಿರುತ್ತದೆ.
ಈ ಸಾಧನೆಯು ದಕ್ಷಿಣ-ಪಶ್ಚಿಮ ವಲಯದಲ್ಲಿ ಕೇವಲ 99 ವಿದ್ಯಾಸಂಸ್ಥೆಗಳಿಗೆ ದೊರಕಿದ ವಿಶೇಷ ಗೌರವವಾಗಿದೆ. ಕಾಲೇಜಿನ ಐಐಸಿ ಘಟಕದ ವತಿಯಿಂದ ನಾವೀನ್ಯತೆ ಹಾಗೂ ಸ್ಟಾರ್ಟಪ್ಗಳ ಕುರಿತಾದ ಹಲವು ಕಾರ್ಯಗಾರಗಳು, ಉಪನ್ಯಾಸ ಸರಣಿಗಳು ಹಾಗೂ ಹ್ಯಾಕಥಾನ್ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಮೆಂಟರ್ಶಿಪ್ ಹಾಗೂ ತಜ್ಞರ ಮಾರ್ಗದರ್ಶನ: ಕಾಲೇಜಿನ ಐಐಸಿ ಘಟಕಕ್ಕೆ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮಂಗಳೂರು ಸಂಸ್ಥೆಯು ಮೆಂಟರ್ ಸಂಸ್ಥೆಯಾಗಿದ್ದು ಭಾರತ ಸರಕಾರದ ಶಿಕ್ಷಣ ಸಚಿವಾಲಯವು ನಿಗದಿಪಡಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಾರ್ಗದರ್ಶನ ನೀಡುತ್ತಿದೆ.
ಮಾತ್ರವಲ್ಲದೆ ವಾಮಂಜೂರಿನ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೂ ಟ್ರೇನಿಂಗ್ ಕಾರ್ಡಿನೇಟರ್ ಆದ ಗ್ಲೆನ್ಸನ್ ಟೋನಿ, ಬೆಂಗಳೂರಿನ ಸ್ಲ್ಯಾಂಗ್ ಲ್ಯಾಬ್‌ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮಧುರಾನಾಥ್ ಆರ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಬೆಂಗಳೂರಿನ ಎಸ್‌ಎಪಿ ಅರಿಬಾ ಟೆಕ್ನಾಲಜೀಸ್‌ನಲ್ಲಿ ಸೀನಿಯರ್ ಪ್ರಾಡಕ್ಟ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಆಗಿ ಕರ್ವವ್ಯ ನಿರವಹಿಸುತ್ತಿರುವ ಪ್ರಣಿತಾ ಕೆ.ಎಸ್. ಮುಂತಾದವರು ಹಲವಾರು ಉಪನ್ಯಾಸಗಳು ಹಾಗೂ ಕಾರ್ಯಗಾರಗಳನ್ನು ನಡೆಸಿಕೊಟ್ಟು ವಿದ್ಯಾರ್ಥಿಗಳಲ್ಲಿ ಹಾಗೂ ಅಧ್ಯಾಪಕರಲ್ಲಿ ನಾವೀನ್ಯತೆ ಮತ್ತು ಕ್ರಿಯಾತ್ಮಕತೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಸರಕಾರದ ಬೆಂಬಲ:
ಕರ್ನಾಟಕ ಇನೊವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ ವತಿಯಿಂದ ಈ ಘಟಕವನ್ನು ನ್ಯೂ ಏಜ್ ಇನ್ನೊವೇಶನ್ ನೆಟ್ವರ್ಕ್ 2.0 ಯೋಜನೆಯ ಅಡಿಯಲ್ಲಿ ಅತಿಥೇಯ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯು ಕರ್ನಾಟಕ ಸ್ಟಾರ್ಟಪ್ ನೀತಿ 2022-27 ಭಾಗವಾಗಿದ್ದು ವಿದ್ಯಾರ್ಥಿಗಳಿಗೆ ವಿವಿಧ ಮಾದರಿಗಳನ್ನು ಹಾಗೂ ಉಪಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಬೇಕಾದ ಸಂಪತ್ತನ್ನು ಒದಗಿಸಿಕೊಡುತ್ತದೆ. ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಾಜೆಕ್ಟ್ಗಳ ರೂಪುರೇಷೆಗಳನ್ನು ಹಾಕಿಕೊಂಡು ಮಂಜೂರಾತಿಯ ನಿರೀಕ್ಷೆಯಲ್ಲಿದ್ದಾರೆ.
ಪ್ರಾಂಶುಪಾಲರಿಂದ ಪ್ರಶಂಸೆ:
ಕಾಲೇಜಿನ ಐಐಸಿ ಘಟಕದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು, ‘ಗತ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಐಐಸಿ ಘಟಕದ ಮೂಲಕ ಇಂಪ್ಯಾಕ್ಟ್ ಲೆಕ್ಷರ್ ಉಪನ್ಯಾಸ ಸರಣಿ, ಸ್ಟಾರ್ಟಪ್ ಕುರಿತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಐಐಸಿಯ ವತಿಯಿಂದ ಆಯೋಜಿಸಲಾಗುವ ಪ್ರತಿಯೊಂದು ಕಾರ್ಯಕ್ರವೂ ಭಾರತ ಸರಕಾರದ ಶೈಕ್ಷಣಿಕ ಸಚಿವಾಲಯವು ಸೂಚಿಸಿದಂತಹ ವಿಷಯಗಳ ಕುರಿತಾಗಿರಬೇಕು.
ಈ ಕಾರ್ಯಕ್ರಮಗಳ ವರದಿಯನ್ನು ಪೂರ್ವ ನಿಗದಿತ ರೀತಿಯಲ್ಲಿ ಶಿಕ್ಷಣ ಸಚಿವಾಲಯದ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಕಾಲೇಜಿನ ಐಐಸಿಯ ವತಿಯಿಂದ ಸುಮಾರು 40 ಕಾರ್ಕ್ರಮಗಳನ್ನು ಆಯೋಜಿಸಿ ವರದಿಯನ್ನು ಅಪ್ಲೋಡ್ ಮಾಡಲಾಗಿತ್ತು. ಈ ವರದಿಯನ್ನು ಅಧಿಕಾರಿಗಳು ನಿಗದಿತ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಿ ಸ್ಟಾರ್ ರೇಟಿಂಗ್ಟನ್ನು ನೀಡುತ್ತಾರೆ. ಪದವಿ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾಸಂಸ್ಥೆಯ ನೆಲೆಯಲ್ಲಿ ಹೇಳುವುದಾದಲ್ಲಿ ಥ್ರೀ ಸ್ಟಾರ್ ರೇಟಿಂಗ್ ಅತ್ಯಂತ ಗಮನಾರ್ಹವಾದ ಸಾಧನೆಯಾಗಿದೆ. ಐಐಸಿಯು ಆಯೋಜಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಅಭಿನಂದನೆಗಳು’ ಎಂದು ಹೇಳಿದರು.