
ಬ್ರಹ್ಮರಕೂಟ್ಟು ಟೋಲ್‌ಗೇಟ್ ಸಿಬ್ಬಂದಿಯಿಂದ ಲಾರಿ ಚಾಲಕನಿಗೆ ಹಲ್ಲೆ
ಬಂಟ್ವಾಳ: ಅವ್ಯವಸ್ಥೆಯ ಆಗರ ಮತ್ತು ಇಡೀ ದೇಶದಲ್ಲಿಯೇ ಇರದ ಬ್ರಹ್ಮರಕೂಟ್ಟು ಟೋಲ್ ಗೇಟ್‌ನಲ್ಲಿ ಸಿಬ್ಬಂದಿಗಳಿಂದಾಗುತ್ತಿರುವ ಹಲ್ಲೆ ಸಹಿತ ವಿವಿಧ ಘಟನೆಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಇದೀಗ ಇಲ್ಲಿನ ಟೋಲ್ ಗೇಟ್ ಸಿಬ್ಬಂದಿಯೋರ್ವ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸುತ್ತಿರುವ ವೀಡಿಯೋ ವೈರಲ್ ಆಗಿದೆ.
ಇಲ್ಲಿನ ಸಿಬ್ಬಂದಿಗಳ ಅನಾಗರಿಕ ವರ್ತನೆ ಹಾಗೂ ರೌಡಿಸಂ ರೀತಿಯ ನಡವಳಿಕೆಯ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಮತ್ತೆ ಗರಂ ಆಗಿದ್ದಾರೆ. ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ಕೇಂದ್ರ ಸರಕಾರದ ಯಾವುದೇ ನೀತಿ-ನಿಯಮಗಳನ್ನು ಉಲ್ಲಂಘಿಸಿ ಬಲವಂತದ ವಸೂಲಾತಿ ಮಾತ್ರ ಇಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರಿಗೆ ಬೇಕಾದಷ್ಟು ಲೇನ್‌ಗಳು ಇಲ್ಲ, ತುರ್ತು ವಾಹನ ಸಂಚಾರಕ್ಕೆ ಬೇಕಾಗುವ ವ್ಯವಸ್ಥೆಗಳೂ ಇಲ್ಲಿಲ್ಲ. ದ್ವಿಚಕ್ರ-ತ್ರಿಚಕ್ರ ವಾಹನ ಸವಾರರು ತೆರಳಬೇಕಾದ ಮಾರ್ಗಗಳ ಮಧ್ಯೆಯು ಅರ್ಧಕ್ಕರ್ಧ ಗೇಟ್ ಅಳವಡಿಸಿ ಸರಾಗವಾಗಿ ಸಂಚಾರPಕ್ಕೂ ಅಡ್ಡಿಪಡಿಸಲಾಗುತ್ತಿದೆ. ವಾಹನ ಸವಾರರು ಸಲೀಸಾಗಿ ಸಂಚರಿಸಲು ಸಾಧ್ಯವಾಗದ ದುಸ್ಥಿತಿಯಲ್ಲಿ ಇಲ್ಲಿನ ರಸ್ತೆಗಳು, ಈ ಎಲ್ಲಾ ಅವ್ಯವಸ್ಥೆ, ಸಮಸ್ಯೆಗಳ ಆಗರದಲ್ಲಿರುವ ಬ್ರಹ್ಮರಕೊಟ್ಲು ಟೋಲ್‌ಗೇಟ್ ಕೇಂದ್ರದಲ್ಲಿ ಸಿಬ್ಬಂದಿಗಳು ವಾಹನ ಸವಾರರ ಮೇಲೆ ನಡೆಸುವ ಗೂಂಡಾಗಿರಿ, ರೌಡಿಸಂ ಇನ್ನಿಲ್ಲದ ರೀತಿಯಲ್ಲಿ ಸಾರ್ವಜನಿಕ ತೊಂದರೆಯನ್ನು ಹುಟ್ಟು ಹಾಕಿದೆ.
ಈ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ಸಾಕಷ್ಟು ಬಾರಿ ಪೊಲೀಸ್ ಇಲಾಖೆಯ ಮುಂದೆ ದೂರಿಕೊಂಡರೂ ಯಾವುದೇ ಕ್ರಮಕೈಗೊಳ್ಳುವುದು ಬಿಡಿ, ಸಿಬ್ಬಂದಿಗಳನ್ನು ಹೆಡೆಮುರಿ ಕಟ್ಟುವ ಧಮ್ಮು ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಇಲ್ಲ ಯಾಕೆಂದರೆ ಇಲ್ಲಿಂದ ಸಂದಾಯವಾಗಬೇಕಾದ ಎಲ್ಲವು ಕಾಲಕಾಲಕ್ಕೆ ಸಿಗುತ್ತದೆ ಎಂದು ಸಾರ್ವಜನಿಕರು, ವಾಹನ ಸವಾರರು ದೂರಿದ್ದಾರೆ.
ಟೋಲ್ ಸಿಬ್ಬಂದಿಗಳ ರೌಡಿಸಂ ಇದೇ ರೀತಿ ಮುಂದುವರಿದರೆ ವಾಹನ ಸವಾರರು, ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೂಡಾ ಅದೇ ಹಾದಿಯಲ್ಲಿ ಪ್ರತ್ಯುತ್ತರ ಅಥವಾ ಪ್ರತಿಕ್ರಿಯೆಯನ್ನು ನೀಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.