
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಮಾರ್ಗದರ್ಶಕರ ತರಬೇತಿ ಕಾರ್ಯಗಾರ
Saturday, January 18, 2025
ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಸಂಪನ್ಮೂಲ ವ್ಯಕ್ತಿಗಳಿಗಾಗಿ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.
ಸಿ.ಬಿ.ಎಸ್.ಇ ಬೋರ್ಡ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯಟ್ ಟ್ರೇನಿಂಗ್ ಮ್ಯಾನೇಜ್ಮೆಂಟ್ ದೆಹಲಿ ಮತ್ತು ಶಕ್ತಿ ವಿದ್ಯಾ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 55ಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರು ಭಾಗವಹಿಸಿದ್ದರು.
ದೀಪವನ್ನು ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದ ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯಟ್ ಟ್ರೇನಿಂಗ್ ಮ್ಯಾನೇಜ್ಮೆಂಟ್ ದೆಹಲಿ ಇದರ ಡೆಪ್ಯೂಟಿ ಡೈರೆಕ್ಟರ್ ಪುನೀತ್ ಕುಮಾರ್ ಶರ್ಮ ಅವರು, ಶಿಕ್ಷಕರು, ಮಾರ್ಗದರ್ಶಕರು ಭವಿಷ್ಯದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ಸದೃಢ ದೇಶವನ್ನು ಕಟ್ಟಲು ಶಿಕ್ಷಕರ ಪಾತ್ರ ಬಹಳ ದೊಡ್ಡದು, ಹಾಗಾಗಿ 2 ದಿನಗಳ ಕಾರ್ಯಗಾರದಲ್ಲಿ ಶಿಕ್ಷಕರು ಉತ್ತಮವಾದ ಮಾಹಿತಿಗಳನ್ನು ಕಲಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಲ್ಲಿರುವ ಭಯ ಮತ್ತು ಕೀಳರಿಮೆಯನ್ನು ಹೋಗಲಾಡಿಸಿ ಉತ್ತಮವಾದ ಭಾಂಧವ್ಯವನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಈ ಎರಡು ದಿನಗಳ ಕಾರ್ಯಗಾರದಲ್ಲಿ ಶಿಕ್ಷಕರು ಕಲಿಕೆ, ತರಬೇತಿ, ಪಾಠ ಯೋಜನೆ, ಪೂರ್ವ ತಯಾರಿ, ಅನುಷ್ಠಾನ ಮತ್ತು ಎನ್.ಇ.ಪಿ-2020ರ ಉದ್ದೇಶ ಮತ್ತು ಅದರ ಸ್ವರೂಪದ ಕುರಿತು ತಿಳಿದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಈ ಕಾರ್ಯಗಾರದ ತರಬೇತುದಾರರಾದ ಐ.ಎಸ್.ಟಿ.ಎಂ ಇದರ ಡೈರೆಕ್ಟರ್ ಪುನೀತ್ ಕುಮಾರ್ ಶರ್ಮ, ಸುರೇಶ್ ಸಿ.ಬಿ.ಎಸ್.ಇ ಜಿಲ್ಲಾ ತರಬೇತಿ ಸಂಘಟಕರು ಇವರಿಗೆ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅವರು ಸನ್ಮಾನಿಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಧಿಕಾರಿ ಡಾ. ಕೆ.ಸಿ. ನಾಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್ ಮತ್ತು ಸುರೇಶ್ ಸಿ.ಬಿ.ಎಸ್.ಇ ಜಿಲ್ಲಾ ತರಬೇತಿ ಸಂಘಟಕರು ದಕ್ಷಿಣ ಕನ್ನಡ ಜಿಲ್ಲೆ ಮತ್ತಿತರು ಉಪಸ್ಥಿತಿರಿದ್ದರು.
ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿದರು. ಚೇತನಾ ನಿರೂಪಿಸಿ, ವಂದಿಸಿದರು.