
ಆನ್‌ಲೈನ್ ವಂಚನೆ, ಎಚ್ಚರದಿಂದಿರಿ: ಇನ್ಸ್‌ಪೆಕ್ಟರ್ ಆನಂತಪದ್ಮನಾಭ
ಬಂಟ್ವಾಳ: ಪ್ರಸಕ್ತ ದಿನಗಳಲ್ಲಿ ಆನ್ ಲೈನ್ ಮೂಲಕ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದ ಇರಬೇಕು, ಜನರ ಸಹಕಾರದಿಂದ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆನಂತಪದ್ಮನಾಭ ಹೇಳಿದರು.
ದ.ಕ. ಜಿಲ್ಲಾ ಪೊಲೀಸ್ ಬಂಟ್ವಾಳ ಉಪವಿಭಾಗ, ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಗಳು ಮತ್ತು ಚಿಣ್ಣರಲೋಕ ಸೇವಾ ಬಂಧು (ರಿ)ಬಂಟ್ವಾಳ ಇದರ ಸಹಭಾಗಿತ್ವದಲ್ಲಿ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್‌ನ ಕರಾವಳಿ ಕಲೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ‘ರಸ್ತೆ ಸುರಕ್ಷತಾ ಸಪ್ತಾಹ-2025, ರಸ್ತೆ ಸುರಕ್ಷತೆ ಹಾಗೂ ಜಾಗೃತಿ’ಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆ ಅಪಘಾತ ಮತ್ತು ಅಪರಾಧಗಳನ್ನು ತಡೆಯುವ ಜವಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ. ಸಾಮಾಜಿಕ ಜಾಲತಾಣಗಳು ಕೂಡ ಯುವಪೀಳಿಗೆಯ ಬದುಕಿಗೆ ಮುಳುವಾಗುತ್ತಿದೆ ಎಂದರು.
ಮಕ್ಕಳ ಬಗ್ಗೆ ಹೆತ್ತವರು ನಿಗಾ ವಹಿಸಬೇಕು ಅವರ ದಿನಚರಿಯಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಕೂಡಲೇ ಪ್ರಶ್ನಿಸಿದರೆ ಮಾತ್ರ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಸಾಧ್ಯ ಎಂದು ಹೇಳಿದರು.
ಆರ್.ಟಿ.ಒ. ಇಲಾಖೆಯ ಅಧಿಕಾರಿ ಪ್ರಮೋದ್ ಕುಮಾರ್ ಅವರು ರಸ್ತೆ ಅಪಘಾತ ಮತ್ತು ಸುರಕ್ಷತಾ ದೃಷ್ಟಿಯಿಂದ ಜಾಗೃತೆ ವಹಿಸಬೇಕಾದ ಅಂಶಗಳ ಬಗ್ಗೆ ಹಾಗೂ ಟ್ರಾಫಿಕ್ ಎಸ್.ಐ. ಸುತೇಶ್ ಅಪಘಾತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನ್ಯಾಯವಾದಿ ಜಯರಾಮ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ. ಕಲೈಮಾರ್, ಟ್ರಾಫಿಕ್ 2 ಎಸ್.ಐ. ಸಂಜೀವ, ಸಮಿತಿ ಪ್ರಮುಖರಾದ ದೇವಪ್ಪ ಕುಲಾಲ್ ಪಂಜಿಕಲ್ಲು ಉಪಸ್ಥಿತರಿದ್ದರು.
ಕರಾವಳಿ ಕಲೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿದರು. ಚಿಣ್ಣರಲೋಕ ಮೋಕೆದ ಕಲಾವಿದರ ಸೇವಾ ಸಂಸ್ಥೆಯ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ರಂಗಕಲಾವಿದ ಎಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.