ಶಾಸ್ತ್ರೀಯ ಭಾಷೆಯ ಓದಿಗೆ ಸಶಕ್ತ ಅಧ್ಯಯನ, ಪಾಂಡಿತ್ಯ ಅವಶ್ಯ: ಪ್ರೊ. ಬಸವರಾಜ ಕಲ್ಗುಡಿ

ಶಾಸ್ತ್ರೀಯ ಭಾಷೆಯ ಓದಿಗೆ ಸಶಕ್ತ ಅಧ್ಯಯನ, ಪಾಂಡಿತ್ಯ ಅವಶ್ಯ: ಪ್ರೊ. ಬಸವರಾಜ ಕಲ್ಗುಡಿ


ಉಜಿರೆ: ಓದುವುದರಲ್ಲಿ ಕ್ರಮಬದ್ಧ ಶಿಸ್ತು, ಪ್ರಮುಖ ತತ್ವಗಳನ್ನು ಅರಿತಿರಬೇಕು. ಓದುವ ಕ್ರಮವನ್ನು ಶಾಲೆಯಿಂದಲೇ ಆರಂಭಿಸಿ ಕವನದ ಅರ್ಥೈಸುವಿಕೆ ಹಾಗೂ ಓದುವ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಕಾವ್ಯದ ಭಾಷೆ, ಹಳೆಗನ್ನಡ ಭಾಷೆಯ ಸೂಕ್ಷ್ಮತೆಯನ್ನು ತಿಳಿಯಬೇಕಾದ ಅಗತ್ಯವಿದೆ. ಶಾಸ್ತ್ರೀಯ ಭಾಷೆಯ ಓದಿಗೆ ಸಶಕ್ತ ಅಧ್ಯಯನ, ಪಾಂಡಿತ್ಯ ಅವಶ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.

ಅವರು ಜ.6 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸೆಮಿನಾರ್ ಹಾಲ್‌ನಲ್ಲಿ ಮೈಸೂರು ಮಾನಸಗಂಗೋತ್ರಿ ಉನ್ನತ ಶಿಕ್ಷಣ ಇಲಾಖೆಯ ಭಾರತೀಯ ಭಾಷಾ ಸಂಸ್ಥಾನದ ಸಹಯೋಗದಲ್ಲಿ ಶಾಸ್ತ್ರೀಯ ಕನ್ನಡ ಅತ್ತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪ್ರೌಢ ಶಾಲಾ ಶಿಕ್ಷಕರು ಹಾಗೂ ಮಕ್ಕಳಿಗೆ ನಡೆದ ಐದು ದಿನಗಳ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಓದು ಮತ್ತು ಅರ್ಥೈಸುವಿಕೆ’ ಕುರಿತಾದ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಹಳೆಗನ್ನಡ ಕಾವ್ಯದ ಬಗ್ಗೆ ಚರ್ಚೆ, ವಿಮರ್ಶೆಯಾಗಬೇಕಾಗಿದೆ. ಸಂಸ್ಕೃತದಿಂದ ಕನ್ನಡ ಭಾಷೆಗೆ ಸೌಂದರ್ಯ ಹೆಚ್ಚಿದೆ, ಪ್ರಭಾವ ಬೆಳೆದಿದೆ. ಹಳೆಗನ್ನಡ ಸಾಹಿತ್ಯವನ್ನು ರಚಿಸಿರುವ ಪಂಡಿತರನ್ನು ಗುರುತಿಸಿ, ಗೌರವಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಉಪಕುಲಪತಿ ಪ್ರೊ. ಎ. ಮುರಿಗೆಪ್ಪ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಪದಪುಂಜಗಳನ್ನು ಅರ್ಥೈಸಿ ಓದುವುದೇ ನಿಜವಾದ ಓದು. ಓದುವ ಸರಿಯಾದ ಕ್ರಮವನ್ನು ರೂಢಿಸಿಕೊಳ್ಳಬೇಕು. ಹಳೆಗನ್ನಡ ಸಾಹಿತ್ಯವನ್ನು ಕ್ರಮಬದ್ಧವಾಗಿ ಪರಿಚಯಿಸಿಕೊಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಕನ್ನಡ ಭಾಷೆಯ ಇಂದಿನ ಸ್ಥಿತಿಗತಿ, ಅಸ್ಮಿತೆಯನ್ನು ಉಳಿಸುವ ಕುರಿತು ಗಂಭೀರವಾಗಿ ಚಿಂತಿಸಬೇಕಾಗಿದೆ. ಭಾಷೆಯ ಮೇಲಿನ ಅಭಿಮಾನ ಬೆಳೆಯಬೇಕು. ಭವ್ಯ ಸಂಸ್ಕೃತಿ, ಪರಂಪರೆ, ಸಾಹಿತ್ಯ ಸೃಷ್ಟಿ, ಮಹಾಕಾವ್ಯ, ಶ್ರೇಷ್ಠ ಕೃತಿಗಳನ್ನು ಅರ್ಥೈಸಿಕೊಳ್ಳುವುದರಿಂದ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಅರಿವಾಗಬಹುದು. ಒಟ್ಟಿನಲ್ಲಿ ಕನ್ನಡ ನಾಡು, ನುಡಿ, ಜಲ, ನೆಲ ಸಂರಕ್ಷಣೆಗೆ ಭಾಷೆಯ ಓದು, ಅರ್ಥೈಸುವಿಕೆ ಅಗತ್ಯವಿದೆ ಎಂದರು.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ ಪ್ರಸ್ತಾವಿಸಿ ಪ್ರೌಢ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಭಯವನ್ನು ದೂರಮಾಡಿ, ಅವರಲ್ಲಿ ಆಸಕ್ತಿ ಮೂಡಿಸಿ ಕನ್ನಡ ವಿಭಾಗಕ್ಕೆ ಬರುವಂತೆ ಪ್ರೇರಣೆ ನೀಡಬೇಕು. ಗದಗ, ಗುಲ್ಬರ್ಗ ಕಡೆಗಳಲ್ಲಿ ಕನ್ನಡ ಶಾಸನಗಳ ಅಧ್ಯಯನ ಶಿಬಿರ ನಡೆಸಲಾಗುತ್ತಿದೆ. ಉಪನ್ಯಾಸಕರಿಂದ 52 ವಾರ ಪ್ರಾಚೀನ ಶಾಸನಗಳ ಕುರಿತು ಆನ್‌ಲೈನ್ ಉಪನ್ಯಾಸ ನಡೆಸಲಾಗುತ್ತಿದೆ ಎಂದರು. 

ಎಸ್‌ಡಿಎಂ ಶೈಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.

ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಭೋಜಮ್ಮ ಕೆ.ಎನ್. ಸ್ವಾಗತಿಸಿದರು. ಉಪನ್ಯಾಸಕ ಡಾ. ದಿವ ಕೊಕ್ಕಡ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ವಂದಿಸಿದರು.

ವಿವಿಧ ಶಾಲೆಗಳ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು. 5 ದಿನಗಳ ಕಾರ್ಯಾಗಾರ ಜ.10 ರಂದು ಮಧ್ಯಾಹ್ನ ಸಮಾರೋಪಗೊಳ್ಳಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article