
‘ಕಾಂತಾರ’ ಸಿನಿಮಾ ಚಿತ್ರೀಕರಣದ ವೇಳೆ ಕಾಡಿಗೆ ಬೆಂಕಿ: ಸ್ಥಳೀಯರಿಂದ ವಿರೋಧ
Monday, January 20, 2025
ಹೆರೂರು: ಹೊಂಬಾಳೆ ನಿರ್ಮಾಣದ, ರಿಷಬ್ ಶೆಟ್ಟಿ ನಾಯಕ ನಟನಾಗಿ ನಿರ್ದೇಶಿಸಿರುವ ‘ಕಾಂತಾರ’ ಅಭೂತಪೂರ್ವ ಯಶಸ್ಸಿನ ಬಳಿಕ ‘ಕಾಂತಾರ’ದ ಮೊದಲ ಭಾಗ (ಪ್ರೀಕ್ವೆಲ್) ‘ಕಾಂತಾರ’ ಚಾಪ್ಟರ್ 1ರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನಡೆಯುತ್ತಿರುವಾಗಲೇ ಚಿತ್ರತಂಡಕ್ಕೆ ವಿಘ್ನ ಎದುರಾಗಿದೆ. ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಚಿತ್ರತಂಡದ ಮೇಲಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದ ಭಾಗದಲ್ಲಿ ಜ. 2ರಿಂದ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡ, ಶೂಟಿಂಗ್‌ಗಾಗಿ ಗೋಮಾಳ ಜಾಗಕ್ಕೆ ಪರವಾನಗಿ ಪಡೆದಿದೆ. ಆದರೆ, ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿಮಾಡುತ್ತಿರುವ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಅರಣ್ಯ ಮತ್ತು ಕಂದಾಯ ಇಲಾಖೆಯವರು ಚಿತ್ರೀಕರಣಕ್ಕೆ ಯಾವುದೆಲ್ಲಾ ಪರವಾನಿಗೆ ನೀಡಿದ್ದಾರೆ ಎಂದು ಬಹಿರಂಗಗೊಳಿಸಬೇಕು. ಸದ್ಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದರಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎನ್ನಲಾಗಿದೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು ಎಂದು ಆಗ್ರಹಿಸಿರುವ ಗ್ರಾಮಸ್ಥರು ಕೂಡಲೇ ಶೂಟಿಂಗ್ ಸ್ಥಗಿತಗೊಳಿಸಿ ಪರಿಸರ ಉಳಿಸಿ. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.