
ಮಂಗಳೂರು ಜನತೆಗೆ ಕಲುಷಿತ ನೀರು-ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ: ಐವನ್ ಡಿಸೋಜಾ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನತೆಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದರ ವಿರುದ್ಧ ಸತ್ಯಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಫೆಬ್ರವರಿ ಪ್ರಥಮ ವಾರ ಬೆಂಗಳೂರಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ. ಒಳಚರಂಡಿ ತ್ಯಾಜ್ಯಗಳು ಶುದ್ಧ ನೀರಿನ ಮೂಲವನ್ನು ಸೇರುತ್ತಿದ್ದು ಕೊಳಚೆ ನೀರನ್ನೇ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಯರ್ ಅವರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿ ಪಾಲಿಕೆ ಸಭೆಯಲ್ಲಿ ಸದನದ ಬಾವಿಗಿಳಿದರೂ ಪ್ರಯೋಜನವಾಗಿಲ್ಲ. ಸತ್ಯಶೋಧನಾ ಸಮಿತಿ ರಚಿಸುವುದಕ್ಕೂ ಪಾಲಿಕೆಯ ಆಡಳಿತ ಮುಂದಾಗಿಲ್ಲ. ಹೀಗಾಗಿ ನಾವೇ ಸಮಿತಿ ರಚಿಸಿ ತನಿಖೆ ಮಾಡಿದ್ದೇವೆ. ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಕೊಳಚೆ ನೀರು ಸೇರುತ್ತಿದೆಯೋ ಅಲ್ಲಿ ಹೋಗಿ ಪ್ರತ್ಯಕ್ಷ ವರದಿ ತಯಾರಿಸಿ ಅದನ್ನು ಮಂಗಳೂರು ಭೇಟಿ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವರು, ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಭೆ ನಡೆದು, ನೀರು ಶುದ್ಧೀಕರಣ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಲಿದೆ ಎಂದರು.
ಬಜಾಲ್, ಪಚ್ಚನಾಡಿ, ಸುರತ್ಕಲ್‌ನ ಮಧ್ಯ ಎಂಬಲ್ಲಿರುವ ಎಸ್‌ಟಿಪಿಯನ್ನು ನಿರ್ವಹಣೆ ಮಾಡಲು ಎಂಆರ್‌ಪಿಎಲ್ ಕಂಪೆನಿಗೆ ಒಪ್ಪಿಸಬೇಕಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಮಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಮಧ್ಯದಲ್ಲಿರುವ ಎಸ್‌ಟಿಪಿಯಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದಾಗಿ ವರ್ಷಕ್ಕೊಮ್ಮೆ ನಡೆಯುವ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ. ಕೆರೆಗೆ ಇಳಿದರೆ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಆಡಳಿತದಲ್ಲಿ ಹೀಗಿರಲಿಲ್ವಾ ಎಂದು ಮರು ಪ್ರಶ್ನಿಸುತ್ತಾರೆ. ನಮ್ಮ ಆಡಳಿತದ ಕಾಲದಲ್ಲಿ ಕೆರೆಯ ನೀರಲ್ಲಿ ಬಟ್ಟೆ ತೊಳೆಯುತ್ತಿದ್ದರು, ಮೀನು ಹಿಡೀತಿದ್ದರು. ಈಗ ನೀರಿನ ಮೂಲಗಳಿಗೆ ಇಳಿಯುವ ಹಾಗೇ ಇಲ್ಲ. ಇದಕ್ಕೆ ಯಾರು ಹೊಣೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯದ ಎಸ್‌ಟಿಪಿ ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಅಲ್ಲಿ 13 ಮಂದಿಗೆ ನಿರ್ವಹಣೆಗೆ ಸಂಬಳ ನೀಡಲಾಗುತ್ತದೆ. ಆದರೆ ಅಲ್ಲಿ ಯಾರೂ ಇರುವುದಿಲ್ಲ. ಕರೆಂಟ್ ಹೋದರೆ ಜನರೇಟರ್ ಇಲ್ಲ. ಒಂದು ಎಸ್‌ಟಿಪಿಗೆ ವರ್ಷಕ್ಕೆ 1.50 ಕೋಟಿ ರೂ.ನಂತೆ ಮೂರು ಎಸ್‌ಟಿಪಿಗೆ 4.50 ಕೋಟಿ ರೂ. ಪಡೆಯುತ್ತಾರೆ. ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ನವೀನ್ ಡಿಸೋಜಾ, ಅನಿಲ್ ಕುಮಾರ್, ನವೀನ್ ಡಿಸೋಜಾ, ಅಶ್ರಫ್, ಲ್ಯಾನ್ಸ್ ಲಾಟ್ ಪಿಂಟೋ ಉಪಸ್ಥಿತರಿದ್ದರು.