.jpeg)
ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಮೂವರ ಬಂಧನ
ಮಂಗಳೂರು: ಜನತೆಯನ್ನು ಬೆಟ್ಟಿಬೀಳಿಸಿದ್ದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ನಗ-ನಗದು ದರೋಡೆ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಮೂವರನ್ನು ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ತಿರುವನಪಳ್ಳಿಯ ಪದ್ಮನೇರಿ ಗ್ರಾಮದ ಅಮ್ಮಂಕೋವಿಲ್‌ನ ನಿವಾಸಿ ಮುರುಗಂಡಿ ತೇವರ್ (36), ಮುಂಬೈನ ಡೊಂಬಿವಿಲಿ ಪಶ್ಚಿಮದ ಗೋಪಿನಾಥ್ ಚೌಕ್‌ಯ ರಕ್ಮಾ ಭಾಯಿ ನಿವಾಸಿ ಯೋಸುವ ರಾಜೇಂದ್ರನ್ (35) ಮತ್ತು ಮುಂಬೈನ ಚೆಂಬೂರ್‌ನ ತಿಲಕ್ ನಗರ ನಿವಾಸಿ ಕಣ್ಣನ್ ಮಣಿ (36) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.17 ರಂದು ಮಧ್ಯಾಹ್ನ 1-1.20 ರ ಸುಮಾರಿಗೆ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ), ಕೆ.ಸಿ. ರಸ್ತೆ, ತಲಪಾಡಿ ಶಾಖೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ ಅಂದಾಜು ೪ ಕೋಟಿ ರೂ. ಮೌಲ್ಯದ ವಸ್ತುಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ 07/20025) ಐಪಿಸಿ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು.
ಕಾರ್ಯಾಚರಣೆಯ ಸಂದರ್ಭದಲ್ಲಿ, ಪೊಲೀಸರು ಅಪರಾಧಕ್ಕೆ ಬಳಸಿದ ಕಾರು, ಮೂರು ಜೀವಂತ ಗುಂಡುಗಳೊಂದಿಗೆ ಎರಡು ಪಿಸ್ತೂಲ್‌ಗಳು, ಮಾರಕಾಸ್ತ್ರಗಳು ಮತ್ತು ಕಳವು ಮಾಡಿದ ನಗದು ಮತ್ತು ಚಿನ್ನದ ಒಂದು ಭಾಗವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ನಿಖರವಾದ ಮೌಲ್ಯವನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಹಜರ್ ನಂತರ ನಿರ್ಧರಿಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಕರಣದ ಇತರ ಆರೋಪಿಗಳ ಪತ್ತೆ ಕಾರ್ಯಚರಣೆ ನಡೆಯುತ್ತಿದೆ.