
ಚಾಲಕನಿಲ್ಲದೆ ಸಾಗಿದ ಬಸ್ಸು: ತಪ್ಪಿದ ಅವಘಡ
Monday, January 13, 2025
ಕುಂದಾಪುರ: ಡ್ರೈವರ್ ಇಲ್ಲದೆ ಬಸ್ಸೊಂದು ತನ್ನಿಂತಾನೇ ಮುಂದಕ್ಕೆ ಚಲಿಸಿ ನಿಂತಿದ್ದ ಕಾರಿಗೆ ಡಿಕ್ಕಿಹೊಡೆದ ಆಶ್ಚರ್ಯಕರ ಘಟನೆ ಘಟನೆ ಸೋಮವಾರ ಬೆಳಿಗ್ಗೆ ಕುಂದಾಪುರ ನಗರದ ಹೊರವಲಯದ ಹಂಗಳೂರು ಎಂಬಲ್ಲಿ ನಡೆದಿದೆ.
ಖಾಸಗಿ ಬಸ್ ಡಿಪೋದಲ್ಲಿ ನಿಲ್ಲಿಸಿದ್ದ ಈ ಬಸ್ ಚಾಲಕನಿಲ್ಲದೆಯೇ ಚಲಿಸಿ ಎರಡು ಸರ್ವೀಸ್ ರೋಡ್ ಹಾಗೂ ಹೆದ್ದಾರಿ ಬ್ಯಾರಿಕೇಡ್ ಗಳನ್ನು ದಾಟಿ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದು ನಿಂತಿದೆ!
ಬಸ್ ಕ್ಲೀನ್ ಮಾಡಿದ ಸಿಬ್ಬಂದಿಗಳು ಬಸ್ಸಿಂದ ಕೆಳಗೆ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಡಿಮೆಯಾಗಿದ್ದರಿಂದ ಜೊತೆಗೆ ಪಾದಚಾರಿಗಳ ಓಡಾಟ ಅಷ್ಟಾಗಿ ಇರದ ಕಾರಣ ಭಾರೀ ಅವಘಡ ತಪ್ಪಿದೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿದಿನವೂ ವಿಷಲ್ ಶಬ್ದ ಹಾಗೂ ರೈಟ್ ರೈಟ್ ಎಂಬುದನ್ನು ಕೇಳಿ ಅಭ್ಯಾಸವಾಗಿರುವ ಬಸ್ಸು, ಅದೇ ಅಭ್ಯಾಸ ಬಲದಿಂದ ಚಲಿಸಿರಬಹುದು ಎಂದು ನೋಡಿದವರೊಬ್ಬರು ಉದ್ಗರಿಸಿದ್ದಾರೆ.