
ಗೋಲ್ಡನ್ ಮೂವೀಸ್ ನಿಂದ ತುಳು ಸಿನಿಮಾ ಪ್ರೊಡಕ್ಷನ್ ನಂ.1
ಮಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಮೂವೀಸ್ ತುಳು ಸಿನಿಮಾ ನಿರ್ಮಾಣಕ್ಕಿಳಿದಿದೆ.
‘ಗೋಲ್ಡನ್ ಮೂವೀಸ್" ಸಂಸ್ಥೆಯಡಿ ಶಿಲ್ಪಾ ಗಣೇಶ್ ಅವರು "ಪ್ರೊಡಕ್ಷನ್ ನಂ.1" ಎಂಬ ತುಳು ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಲಿರುವ ಸಿನಿಮಾದ ಮುಹೂರ್ತ ಸಮಾರಂಭ ಇಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡು ಸ್ಟಾರ್ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ”ಗೋಲ್ಡನ್ ಮೂವೀಸ್‌ನಿಂದ ಪ್ರೊಡಕ್ಷನ್ ನಂ.1 ನಿರ್ಮಾಣಗೊಳ್ಳುತ್ತಿದೆ. ನಾನು ಮೊದಲು ನಟಿಸಿದ ಸಿನಿಮಾ ಮಂಗಳೂರಿನಲ್ಲಿ ಶೂಟಿಂಗ್ ಆಗಿತ್ತು. ಇದರ ನಿರ್ದೇಶಕ, ಮ್ಯೂಸಿಕ್ ಡೈರೆಕ್ಟರ್ ಮಂಗಳೂರಿನವರಾಗಿದ್ದರು. ನಾನು ಮದುವೆಯಾದದ್ದು ಮಂಗಳೂರಿನ ಹುಡುಗಿಯನ್ನು. ಇದೀಗ ಮಂಗಳೂರಿಗೆ ಬಂದು ತುಳು ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ತಂಡ ನಿರ್ಧರಿಸಿಲ್ಲ. ಆದರೆ ಹಾಡೊಂದರಲ್ಲಿ ಪಾತ್ರ ಇರುವ ಸಾಧ್ಯತೆ ಇದೆ” ಎಂದರು.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಮೊದಲ ಬಾರಿಗೆ ತುಳು ಸಿನಿಮಾದತ್ತ ಆಕರ್ಷಿತರಾಗಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ಪಾತ್ರದ ಬಗ್ಗೆ ಖಚಿತವಾಗಿಲ್ಲವಾದರೂ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ನೇತಾರ ಹರಿಕೃಷ್ಣ ಬಂಟ್ವಾಳ್‌ರವರ ಪುತ್ರ ನಿತ್ಯ ಪ್ರಕಾಶ್ ಬಂಟ್ವಾಳ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಮೃತ ನಾಯಕ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ರವಿ ರಾಮಕುಂಜ, ವಜ್ರಧೀರ್ ಜೈನ್, ರೂಪ ವರ್ಕಾಡಿ, ಸದಾಶಿವ ಅಮೀನ್, ಸುಂದರ್ ರೈ ಮಂದಾರ, ಚಂದ್ರ ಹಾಸ ಮಾಣಿ, ಹರಿಶ್ಚಂದ್ರ ಪೆರಾಡಿ, ಪಾಂಡುರಂಗ ಅಂಚನ್, ಸುರೇಶ್ ಅಂಚನ್, ಜಯಶೀಲಾ ಮರೋಳಿ, ಧೃತಿ ಸಾಯಿ ಸೇರಿ ಹಲವರು ನಟಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಗ್ರಾಹಕರಾಗಿ ಸಂತೋಷ್ ರೈ ಪಾತಜೆ, ಸಂಗೀತ ನಿರ್ದೇಶಕರಾಗಿ ಸ್ಯಾಮೂವಲ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಮೋಹನ್ ಭಟ್ಕಳ್, ಮ್ಯಾನೇಜರ್ ಪ್ರಶಾಂತ್ ಆಳ್ವಾ ಕಲ್ಲಾ ಇದ್ದು, ನಿರ್ದೇಶನ ತಂಡದಲ್ಲಿ ಕಿಶೋರ್ ಮೂಡಬಿದಿರೆ ಮಣಿ, ಪ್ರಸನ್ನ ಪಿ, ಅಕ್ಷತ್ ವಿಟ್ಲಾ, ಫರಾಜ್ ಕಾರ್ಯ ನಿರ್ವಹಿಸಲಿದ್ದಾರೆ.
ಕುದ್ರೋಳಿ ದೇವಸ್ಥಾನದ ಅಭಿವೃದ್ಧಿಯ ರೂವಾರಿ, ಹಿರಿಯ ನೇತಾರ ಬಿ. ಜನಾರ್ದನ ಪೂಜಾರಿ, ಉದ್ಯಮಿ, ದಾನಿ ಡಾ. ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.