
ಬಡ ವಿದ್ಯಾರ್ಥಿಗಳಿ ಹಾಸ್ಟಲ್ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ: ಶಾಸಕ ಭರತ್ ಶೆಟ್ಟಿ
ಮಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಡ ವಿದ್ಯಾರ್ಥಿಗಳಿಗೆ ಕೊರತೆಯಾಗದಂತೆ ಹಾಸ್ಟೆಲ್ ಸೌಲಭ್ಯ ಏರ್ಪಡಿಸಲು ಸರ್ಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮಂಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ಗಳಿದ್ದರೂ ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ಇದರಿಂದಾಗಿ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್‌ಗಳ ಕೊರತೆ ತಲೆದೋರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಾಸ್ಟೆಲ್‌ಗಳ ಕೊರತೆ ನಿವಾರಿಸಲು ಅಗತ್ಯ ಪ್ರಸ್ತಾವನೆಗಳನ್ನು ಕಳುಹಿಸಿಕೊಡಬೇಕು. ನಾನು ಸರ್ಕಾರದಲ್ಲಿ ಮಾತನಾಡಿದ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಮಂಗಳೂರು ತಾಲೂಕಿನಲ್ಲಿ ಏಳು ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ. ಕದ್ರಿ ಮತ್ತು ಉರ್ವಸ್ಟೋರ್‌ಗಳಲ್ಲಿ ಎರಡು ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿದೆ. ಈ ಬಾರಿ ಎರಡು ಹೊಸ ಹಾಸ್ಟೆಲ್ ನಿರ್ಮಾಣವಾಗಿದ್ದು, ತಲಾ ನೂರು ಮಕ್ಕಳಿಗೆ ಅವಕಾಶ ಇದೆ. ಇನ್ನೂ ಎರಡು ಹಾಸ್ಟೆಲ್‌ಗಳು ವಿದ್ಯಾರ್ಥಿನಿಯರಿಗೆ ಮಂಜೂರುಗೊಳ್ಳಬೇಕಾಗಿದೆ ಎಂದರು.
ಕೆಪಿಟಿ ಬಳಿಯ ಹಾಸ್ಟೆಲ್ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಅದರ ದುರಸ್ತಿಗೆ 1 ಕೋಟಿ ರು.ಗಳ ಅವಶ್ಯಕತೆ ಇದೆ. ಸುರತ್ಕಲ್ ಹಾಸ್ಟೆಲ್ನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದರು.
ಕಾವೂರು ಅಥವಾ ಕಣ್ಣೂರುಗಳಲ್ಲಿ ಹಾಸ್ಟೆಲ್ಗೆ ಸ್ವಂತ ಕಟ್ಟಡಕ್ಕೆ ಜಾಗ ಪರಿಶೀಲನೆ ನಡೆಸುತ್ತಿರುವುದಾಗಿ ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದರು
ಅಂಗನವಾಡಿಗಳಿಗೆ ಅಕ್ಟೋಬರ್‌ನಲ್ಲಿ ಹುದ್ದೆ ಭರ್ತಿ ಮಾಡಲಾಗುವುದು. ಮಂಗಳೂರು ತಾಲೂಕಲ್ಲಿ 48 ಬಾಡಿಗೆ ಕಟ್ಟಡಗಳಿದ್ದು, 27 ನಿವೇಶನಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಲ್ಕು ಕಟ್ಟಡಕ್ಕೆ ಅನುದಾನ ಮಂಜೂರುಗೊಳ್ಳಬೇಕಾಗಿದೆ. ಬಾಕಿ ಉಳಿದ ಕಟ್ಟಡಗಳ ನಿರ್ಮಾಣಕ್ಕೆ ಕೆಲವು ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿ ಬಳಕೆ ಮಾಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು.
ಮಂಗಳೂರಿನ ಜೋಕಟ್ಟೆಯಲ್ಲಿ 30 ಬೆಡ್‌ನ ಆಯುಷ್ ಆಸ್ಪತ್ರೆ ನಿರ್ಮಾಣವಾಗಲಿದೆ. ಕೊಣಾಜೆಯಲ್ಲೂ ಆಯುಷ್ ಆಸ್ಪತ್ರೆ ನಿರ್ಮಾಣದ ಪ್ರಸ್ತಾಪ ಇದೆ. ಮಂಗಳೂರಿನ ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಆಯುಷ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆಯುಷ್ ವೈದ್ಯಾಧಿಕಾರಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆ ಜಾರಿಯ ಹಂತದಲ್ಲಿದೆ. ಈ ಯೋಜನೆಯಡಿ ಡಯಾಬಿಟಿಕ್, ಹೈಪರ್ ಟೆನ್ಶನ್ ಹಾಗೂ ಮೂರು ವಿಧದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಯೋಜನೆಯ ಪ್ರಕಾರ ಸಮುದಾಯ ಆರೋಗ್ಯ ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇರಲಿದ್ದಾರೆ. ಇವರು ಶಂಕಿತ ಅನಾರೋಗ್ಯ ಪೀಡಿತರ ಮನೆಗಳಿಗೆ ಭೇಟಿ ನೀಡಿ ಅಂಕಿ ಅಂಶ ಸಂಗ್ರಹಿಸುವ ಜೊತೆಗೆ ಚಿಕಿತ್ಸೆಯನ್ನೂ ನೀಡಲಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಹೇಳಿದರು. ಇವರ ಜೊತೆಗೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡರೆ, ಅವರಿಗ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಶಾಸಕರು ತಿಳಿಸಿದರು.
ಪ್ರಧಾನಮಂತ್ರಿಗಳ ಆಶಯದಂತೆ 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತಕ್ಕಾಗಿ ನೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕ್ಷಯರೋಗ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಫೆಬ್ರವರಿ, ಮಾರ್ಚ್ ತಿಂಗಳ ವೇಳೆಗೆ ಮನೆಗಳಲ್ಲಿ ನೀರು ಸಂಗ್ರಹಿಸುವುದರಿಂದ ಲಾರ್ವಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಬಂದರು, ಎಕ್ಕೂರು, ಜೆಪ್ಪು ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಲಾರ್ವಳ ಬಗ್ಗೆ ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದೆ. ತಿಂಗಳ ಮೊದಲ ಎರಡು ಶುಕ್ರವಾರ ಸಾಮೂಹಿಕವಾಗಿ ಲಾರ್ವ ತಪಾಸಣಾ ಕಾರ್ಯ ನಡೆಸಲಾಗುತ್ತದೆ. ಕಟ್ಟಡ ನಿರ್ಮಾಣ ಕಾರ್ಯಗಳ ಮೇಲೆ ನಿಗಾ ಇರಿಸಲಾಗುತ್ತದೆ. ಮಹಾನಗರ ಪಾಲಿಕೆ ಮಲೇರಿಯಾ ವಿಭಾಗದ ಸಿಬ್ಬಂದಿಯ ಸಹಕಾರದಲ್ಲಿ ಮಲೇರಿಯಾ, ಡೆಂಘೀ ಸಾಂಕ್ರಾಮಿಕ ರೋಗಗಳ ನಿರ್ಮೂಲನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ಉತ್ತರಿಸಿದರು.
ತಾ.ಪಂ. ಆಡಳಿತಾಧಿಕಾರಿ ರವಿ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.