
ವೆಂಕಟರಮಣ ದೇವಸ್ಥಾನ: 10ರಂದು ವೈಕುಂಠ ಏಕಾದಶಿ
ಮಂಗಳೂರು: ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜ. 10ರಂದು ಏಳನೇ ವರ್ಷದ ವೈಕುಂಠ ಏಕಾದಶಿ ಆಚರಣೆ ನಡೆಯಲಿದೆ.
ದೇವರ ಪ್ರೇರಣೆಯಂತೆ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಅಂದು ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನೆರವೇರಲಿದೆ. ಸಮಸ್ತ ಜನತೆ ಭಾಗವಹಿಸಬಹುದು ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಬಿ. ಪ್ರವೀಣ್ ಶೇಟ್ ನಾಗ್ವೇಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ವೀನರ್ ಗಣೇಶ್ ಪ್ರವೀಣ್ ನಾಗ್ವೇಕರ್ ಮಾತನಾಡಿ, ಅಂದು ಬೆಳಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃಪೂಜೆ, 7ರಿಂದ 8ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, 8ರಿಂದ 10ರವರೆಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1ರಿಂದ 3ರವರೆಗೆ ಭಜನಾ ಕಾರ್ಯಕ್ರಮ, 3ರಿಂದ ಸಂಜೆ 4ರವರೆಗೆ ವೈದಿಕರಿಂದ ವೇದ ಪಾರಾಯಣ, ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ, ಸಂಜೆ 4.30ರಿಂದ ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ, ರಾತ್ರಿ 9ಕ್ಕೆ ದೀಪಾರಾಧನೆ, ಮಹಾಪೂಜೆ, 10 ಗಂಟೆಗೆ ವಿಠೋಬ ದೇವರ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದರು.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಈ ಬಾರಿ ದೇವಳವನ್ನು ವಿಶೇಷವಾಗಿ ಸಾವಯವ ಕೃಷಿಯ ಸಸಿಗಳಿಂದ ಅಲಂಕರಿಸಲಾಗುತ್ತಿದೆ. ಹರಿವೆ, ಪಾಲಕ್, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ಅಲಂಕಾರಕ್ಕೆ ಬಳಸಲಾಗಿದೆ. ಆಗಮಿಸುವ ಭಕ್ತರಿಗೆ ಸಸಿಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು. ಸೂರಜ್ ರಾವ್ ಅವರ ನೇತೃತ್ವದಲ್ಲಿ ಸಸಿಗಳನ್ನು ಸಿದ್ದಪಡಿಸಲಾಗಿದೆ. ಪಾಲಕ್, ಹರಿವೆ, ಬೀನ್ಸ್, ಅಲಸಂಡೆ, ಬೆಂಡೆ ಸಹಿತ ಒಟ್ಟು 10ಸಾವಿರ ಗಿಡಗಳನ್ನು ಸಿದ್ದಪಡಿಸಲಾಗಿದೆ ಎಂದು ಗಣೇಶ್ ಪ್ರವೀಣ್ ನಾಗ್ವೇಕರ್ ಮಾಹಿತಿ ನೀಡಿದರು.
ದೇವಳದ ಟ್ರಸ್ಟಿಗಳಾದ ಬಿ.ಸಾಯಿದತ್ ನಾಯಕ್, ವಿನಾಯಕ ಶೇಟ್ ಉಪಸ್ಥಿತರಿದ್ದರು.