
ವೃದ್ಧ ದಂಪತಿಯ ಕೊಲೆ, ಚಿನ್ನಾಭರಣ ಕಳವು ಪ್ರಕರಣ: ಆರೋಪಿಗೆ 23 ವರ್ಷ ಶಿಕ್ಷೆ
ಮಂಗಳೂರು: ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್‌ನಲ್ಲಿ ವಾಸ್ತವ್ಯವಿದ್ದ ವೃದ್ಧ ದಂಪತಿಯ ಕೊಲೆ ಮಾಡಿ ಮನೆಯಲ್ಲಿದ್ದ 25 ಪವನ್ ಚಿನ್ನ ಹಾಗೂ ನಗದು ಸೇರಿ ಸುಮಾರು 4.50 ಲಕ್ಷ ರೂ.ಮೌಲ್ಯದ ಸೊತ್ತು ಸುಲಿಗೆ ಮಾಡಿದ ಪ್ರಕರಣದಲ್ಲಿ ಗದಗ ಜಿಲ್ಲೆ ಬಿ.ಸಿ.ಕೇರಿ ಓಣಿ ನಿವಾಸಿ ರಾಜು ಕಲ್ಲವಡ್ಡರ್ ಯಾನೆ ರಾಜೇಶ್ ಯಾನೆ ರಾಜು ಕಲ್ಲ ವಡ್ಡರ್ ಎಂಬಾತನನ್ನು ತಪ್ಪಿತಸ್ಥ ಎಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಶನಿವಾರ ತೀರ್ಪು ನೀಡಿದ್ದಾರೆ.
ಅಪರಾಧಿಗೆ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲನಾದರೆ 3 ತಿಂಗಳ ಕಠಿಣ ಸಜೆ ಅನುಭವಿಸುವಂತೆ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 302ಕ್ಕೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲನಾದಲ್ಲಿ 3 ತಿಂಗಳ ಕಠಿಣ ಸಜೆಯನ್ನು ವಿಧಿಸಲಾಗಿದೆ.
ಈ ಎರಡು ಶಿಕ್ಷೆಯನ್ನು ಒಂದರ ನಂತರ ಒಂದರಂತೆ ಅನುಭವಿಸಲು ಆದೇಶಿಸಲಾಗಿದೆ. ಭಾರತೀಯ ದಂಡ ಸಂಹಿತೆ ಕಲಂ 392 ರಡಿಯ ಶಿಕ್ಷೆಯನ್ನು ಪ್ರಥಮವಾಗಿ ಅ ನುಭವಿಸಲು ಆದೇಶಿಸಲಾಗಿದೆ. 10 ವರ್ಷದ ಕಠಿಣ ಸಜೆಯನ್ನು ಅಪರಾಧಿ ದಸ್ತಗಿರಿಯಾದ ಕಾಲದಿಂದ ಈವರೆಗೂ ನ್ಯಾಯಾಂಗ ಬಂಧನದಲ್ಲಿರುವ ಅವಧಿ ಕಡಿತಗೊಳಿಸಿ ಉಳಿದ ಅವಧಿಯಲ್ಲಿ ಅನುಭವಿಸಲು ಆದೇಶಿಸಲಾಗಿದೆ.
ಅಪರಾಧಿ ರಾಜು ಕಲ್ಲವಡ್ಡರ್ ಯಾನೆ ರಾಜೇಶ್ ಯಾನೆ ರಾಜು ಕಲ್ಲ ವಡ್ಡರ್‌ನ ಮೇಲೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗಗಳಲ್ಲಿಯೂ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ಪೊಲೀಸರಿಂದ ತಪ್ಪಿಸಿಕೊಂಡ ಬಗ್ಗೆಯೂ ಅಂಕೋಲಾದಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ರಾಜು ಕಲ್ಲವಡ್ಡರ್ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ 2015ರ ಡಿಸೆಂಬರ್ 2ನೇ ವಾರದಲ್ಲಿ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಬಾಂಜಾರು ಮಲೆ ಎಂಬಲ್ಲಿ ಡ್ಯಾಂ ಕಾಮಗಾರಿಗೆ ಇತರ ಕೂಲಿ ಕಾರ್ಮಿಕರೊಂದಿಗೆ ಬಂದು ವಾಸ್ತವ್ಯವಿದ್ದ ಸಂದರ್ಭ ಘಟನೆ ನಡೆದಿತ್ತು.
2016ರ ಜ.11ರಂದು ರಾತ್ರಿ ವೃದ್ಧ ದಂಪತಿಯ ಮನೆಯ ಬಳಿ ಬಂದು ಮೂಗನಂತೆ ನಟಿಸಿ ಕುಡಿಯಲು ನೀರು ಬೇಕು ಎಂದು ಕೇಳಿದ್ದ. ನಂತರ ದಾರಿ ತೋರಿಸುವ ನೆಪ ಮುಂದಿಟ್ಟಿದ್ದ. ಇದನ್ನು ನಂಬಿದ ವರ್ಕಿ(85) ಅವರು ಕತ್ತಲೆಯಲ್ಲಿ ಟಾರ್ಚ್ ಲೈಟ್ ಮೂಲಕ ದಾರಿ ತೋರಿಸುತ್ತಾ ಮುಂದೆ ಹೋದಂತೆ ಮನೆಯಿಂದ 70 ಮೀಟರ್ ದೂರದಲ್ಲಿ ಊರುಗೋಲಿನಿಂದ ವರ್ಕಿ ಮೇಲೆ ಹಲ್ಲೆ ನಡೆಸಿ, ಅವರು ಉಟ್ಟಿದ್ದ ಲುಂಗಿಯಿಂದಲೇ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದನು. ಬಳಿಕ ಮನೆಯೊಳಗೆ ಪ್ರವೇಶಿಸಿ ವರ್ಕಿ ಅವರ ಪತ್ನಿ ಎಲಿಕುಟ್ಟಿ(80) ಅವರನ್ನೂ ಊರುಗೋಲಿನಿಂದ ಹಲ್ಲೆ ನಡೆಸಿ ಉಸಿರು ಕಟ್ಟಿಸಿ ಕೊಲೆ ಮಾಡಿ ಮನೆಯ ಕಪಾಟುಗಳನ್ನು ತೆರೆದು ಅದರಲ್ಲಿದ್ದ ಚಿನ್ನ ಹಾಗೂ ನಗದು ಸುಲಿಗೆ ಮಾಡಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿದ ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿಗಳ ವಿಚಾರಣೆಯನ್ನು ಹಿಂದಿನ ಸರ್ಕಾರಿ ಅಭಿಯೋಜಕ ಶೇಖರ ಶೆಟ್ಟಿ ಹಾಗೂ ಈಗ ಜ್ಯೋತಿ ಪ್ರಮೋದ ನಾಯಕ ಮಾಡಿದ್ದರು.