
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ನಾಲ್ಕನೇ ಆರೋಪಿಯ ಬಂಧನ
ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಗೆ ಪ್ರಕರಣದಲ್ಲಿ ಬಂಧಿತ ನಾಲ್ಕನೇ ಆರೋಪಿ ಷಣ್ಮುಗ ಸುಂದರಂ(65)ನನ್ನು ತಮಿಳುನಾಡಿನಲ್ಲಿ ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸರು ಮಂಗಳೂರಿಗೆ ಕರೆತರುತ್ತಿದ್ದಾರೆ. ಈ ದರೋಡೆ ಪ್ರಕರಣದಲ್ಲಿ ಈಗಾಗಲೇ ಮುರುಗಂಡಿ ದೇವರ್, ರಾಜೇಂದ್ರನ್ ಹಾಗೂ ಮಣಿ ಈ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಗಂಡಿ ದೇವರ್‌ನ ತಂದೆ ಷಣ್ಮುಗ ಸುಂದರಂ ಆಗಿದ್ದು, ದರೋಡೆ ಮಾಡಿದ ಚಿನ್ನಾಭರಣಗಳನ್ನು ತಂದೆಯ ಬಳಿ ಬಚ್ಚಿಡುವಂತೆ ನೀಡಿದ್ದ. ಮುರುಗಂಡಿ ನೀಡಿದ ಮಾಹಿತಿ ಮೇರೆಗೆ ಷಣ್ಮುಗ ಸುಂದರಂನನ್ನು ಬಂಧಿಸಲಾಗಿದೆ. ಬಂಧಿತನಿಂದ 16.250 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾದ ಮುರುಗಂಡಿ ದೇವರ್ ಮತ್ತು ರಾಜೇಂದ್ರನ್‌ನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೋಟೆಕಾರು ಬ್ಯಾಂಕ್, ದರೋಡೆಗೆ ಸ್ಕೆಚ್ ಹಾಕಿದ ಸ್ಥಳ ಹಾಗೂ ಟೋಲ್‌ಗೇಟ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಅಲ್ಲದೆ ದರೋಡೆಕೋರರು ಕೋಟೆಕಾರು ತಲುಪಿದ ಹಾಗೂ ಅಲ್ಲಿಂದ ದರೋಡೆ ಮಾಡಿ ತೆರಳಿದ ಪ್ರದೇಶಗಳಿಗೆ ಇವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಗಿದೆ.
ಉಳಿದ ಆರೋಪಿಗಳಿಗೆ ಶೋಧ:
ಸದ್ಯ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಲಾಗಿದ್ದು, ಇನ್ನೂ ಎರಡ್ಮೂರು ಮಂದಿ ಆರೋಪಿಗಳ ಪತ್ತೆ ಕಾರ್ಯ ಆಗಬೇಕಿದೆ. ಉಳಿದ ಆರೋಪಿಗಳು ಉತ್ತರ ಭಾರತದಲಿ ತಲೆಮರೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ದರೋಡೆಗೆ ಸಹಕರಿಸಿದ ಸ್ಥಳೀಯ ವ್ಯಕ್ತಿಯೊಬ್ಬರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.