
ಜ.30 ರವರೆಗೆ ‘ಶತನಮನ ಶತಸ್ಮರಣ’ ಕಾರ್ಯಕ್ರಮ
ಮಂಗಳೂರು: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಾಬ್ಧಿ ಆರಾಧನಾ ಮಹೋತ್ಸವದ ಅಂಗವಾಗಿ ಶತನಮನ ಶತಸ್ಮರಣ ಎಂಬ ಕಾರ್ಯಕ್ರಮ ನಗರದ ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದಲ್ಲಿ ಜ.30ರ ವರೆಗೆ ಆಯೋಜಿಸಲಾಗಿದೆ.
ಗುರುಸ್ಮರಣೆಯ ಹಿನ್ನೆಲೆಯಲ್ಲಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ.26ರಂದು ಸಂಜೆ 6 ಗಂಟೆಗೆ ಜಿಎಸ್‌ಬಿ ಸಮಾಜದ 100 ಗಾಯಕರು ಏಕ ಕಾಲದಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಶತನಮನ-ಶತಸ್ಮರಣ ಎಂಬ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಗಾಯನ ಕಾರ್ಯಕ್ರಮದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಕುರಿತು ರಚಿಸಿರುವ ಗೀತೆಗಳನ್ನು 100 ಕಲಾವಿದರು ಭಕ್ತಿ ಭಾವ ಪೂರ್ವಕವಾಗಿ ಏಕಕಾಲದಲ್ಲಿ ಹಾಡಲಿದ್ದಾರೆ.
ಜ.27ರಂದು ಸಂಜೆ 6 ಗಂಟೆಯಿಂದ ಪ್ರತಿಭಾನ್ವಿತ ಯುವ ಗಾಯಕಿ ಸೂರ್ಯಗಾಯತ್ರಿ ಮತ್ತು ತಂಡದವರಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಪ್ರತಿಭಾನ್ವಿತ ಯುವ ಕಲಾವಿದ ಅಂಕುಶ್ ಎನ್. ನಾಯಕ್ ಅವರಿಂದ ಸಿತಾರ್ ವಾದನ ನಡೆಯಲಿದೆ. ಬಳಿಕ ಹೆಸರಾಂತ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರಿಂದ ಸುಧೀಂದ್ರ ಸ್ಮರಣ ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನರಸಿಂಹ ನಾಯಕ್ ಅವರು ಸ್ವಾಮೀಜಿ ಕುರಿತ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಜ.29ರಂದು ಸಂಜೆ 6 ಗಂಟೆಗೆ ಪದ್ಮಶ್ರೀ ಪುರಸ್ಕೃತ, ಕಂಚಿನ ಕಂಠದ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಜ.30ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಪುಣೆಯ ನಾಗೇಶ್ ಅಡ್ಗಾಂವ್ಕರ್ ಜುಗಲ್ ಬಂಧಿ ನಡೆಯಲಿದೆ. ಭಕ್ತಾಭಿಮಾನಿಗಳು ಈ ವಿಶೇಷ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.