
ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹ
ಮಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಾಡು ತಲೆ ತಗ್ಗಿಸುವ ಕೃತ್ಯ ನಡೆದಿದ್ದು, ಕೂಡಲೇ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆಗ್ರಹಿಸಿದರು.
ಅವರು ಇಂದು ನಗರದ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕಡಿದು ಕ್ರೌರ್ಯ ಮೆರೆದವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಕ್ರಾಂತಿ ಹಬ್ಬದ ದಿನ ಗೋವುಗಳ ಪೂಜೆಯನ್ನು ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದು, ಗೋವುಗಳನ್ನು ರಕ್ಷಿಸಬೇಕಾದ ಸರ್ಕಾರ ಬೂಟಾಟಿಕೆಯಾಡುತ್ತಿದೆ. ಹಸುವಿನ ಕೆಚ್ಚಲನ್ನು ಬ್ಲೇಡಿನಿಂದ ಕಡಿದಿದ್ದಾರೆ, ಒಂದು ಹಸುವಿನ ಒಂದು ತೊಟ್ಟು, ಇನ್ನೊಂದು ಹಸುವಿನ 2 ತೊಟ್ಟು, ಇನ್ನೊಂದು ಹಸುವಿನ 4 ಕಾಲುಗಳ ಹಿಂಬದಿಗೆ ಹಾಯ ಮಾಡಿದ್ದು, 10 ಲೀಟರ್‌ನಷ್ಟು ರಕ್ತ ಹರಿಸಿದ್ದಾರೆ. ಈ ಕೃತ್ಯ ಗೊತ್ತಾಗಬಾರದು ಎಂದು ಸಿಸಿ ಕ್ಯಾಮರಾಗಳನ್ನು ಆಫ್ ಮಾಡಿ, ಆಸಿಡ್ ಬಳಸಿ ರಕ್ತವನ್ನು ತೊಳೆದಿದ್ದಾರೆ ಎಂದು ದೂರಿದರು.
ಈ ಕೃತ್ಯದಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ಬಂಧಿಸಿದ್ದು, ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದ್ದು, ರಾಜ್ಯಾದ್ಯಂತ ಹಾಡುಹಗಲೇ ಬಹಿರಂಗವಾಗಿ ಕಸಾಯಿಖಾನೆಗೆ ಗೋವುಗಳನ್ನು ವಾಹನಗಳ ಮೂಲಕ ಕೊಂಡೊಯ್ಯುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ. ಗೋವುಗಳನ್ನು ರಕ್ಷಿಸಲು ಮುಖ್ಯಮಂತ್ರಿಗಳು ಗೋಕಳ್ಳರನ್ನು ಬ್ಲಾಕ್ ಲೀಸ್ಟ್ ಮಾಡಬೇಕು ಆಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದಿನಿಂದಲೂ ಚಾಮರಾಜಪೇಟೆಯಲ್ಲಿರುವ 4 ಎಕ್ಕರೆ ಪ್ರದೇಶದ ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಸ್ಥಳದಲ್ಲಿ ಗೋಶಾಲೆಯನ್ನು ನಿರ್ಮಿಸಬೇಕು ಇದಕ್ಕೆ ಕೃಷಿ ಸಚಿವರು ಸಹಕರಿಸಬೇಕು ಎಂದ ಅವರು ಕೃತ್ಯ ನಡೆದ ಸ್ಥಳಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ೩ ಹಸುಗಳನ್ನು ನೀಡುವುದಾಗಿ ತಿಳಿಸಿದ್ದು, ಗೋವು ನೀಡುವ ಬದಲು ರಕ್ಷಿಸುವ ಕೆಲಸವನ್ನು ಮಾಡಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಮುಖ್ಯಮಂತ್ರಗಳ ಮೂಗಿನ ಅಡಿಯಲ್ಲಿಯೇ ಈ ಕೃತ್ಯ ನಡೆದಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ದೇವರೆಂದು ಪೂಜಿಸುವ ಗೋವಿನ ಕೆಚ್ಚಲನ್ನು ಕತ್ತರಿಸಿರುವವರ ಬಗ್ಗೆ ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ದುರಾಹಂಕಾರ ಒಂದೆಡೆ ಆದರೆ ಮತ್ತೊಂದೆಡೆ, ಭಯೋತ್ಪಾದಕ ಚಟುವಟಿಕೆ ನಡೆಸಲು ಪುಷ್ಠಿ ನೀಡಿದಂತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತೆಂದರೆ ಸಮಾಜ ವಿರೋಧಿ ಕೃತ್ಯಗಳು ಹೆಚ್ಚಾಗಿ ನಡೆಯುತ್ತವೆ. ಸಾಮಾಜಿಕ ವಿರೋಧಿ ಕೃತ್ಯವೆಸಗುವವರನ್ನು ಬಂಧಿಸಲು ಪೊಲೀಸರು ಹೋದಲ್ಲಿ ನಮ್ಮ ಸರ್ಕಾರ ಎಂದು ಹೇಳಿ ಪೊಲೀಸರನ್ನು ಎದುರಿಸುವ ಕೆಲಸ ನಡೆಯುತ್ತಿದೆ ಎಂದ ಅವರು ಬಹುಜನರಾದ ನಾವು ಇಂತಹ ಕೃತ್ಯವನ್ನು ಸಹಿಸುವುದಿಲ್ಲ. ಸನಾತನಿಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರ ನೀಡಿದರು.
ಗಾಂಧಿಯವರ ವಿಚಾರಧಾರೆಗಳನ್ನು ಮನೆ ಮನೆಗಳಿಗೆ ತಲುಪಿಸುವುದಾಗಿ ಹೇಳಿದ್ದು, ಚಾಮರಾಜಪೇಟೆಯಲ್ಲಿ ನಡೆದಿರುವ ಘಟನೆ ನಾಚಿಕೆ ವಿಚಾರ. ಓಟಿಗಾಗಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಏನಾದರೂ ತಪ್ಪು ನಡೆದರೆ ಸರ್ಕಾರವೇ ನೇರ ಹೊಣೆ. ಸಿದ್ದರಾಮಯ್ಯ ಅವರೇ ಹೊಣೆ ಎಂದು ಹೇಳಿದರು.
ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಗೋವುಗಳಿಗೆ, ಹಿಂದೂ ಯುವಕರಿಗೆ ಉಳಿಗಾಲವಿಲ್ಲದಂತಾಗಿದೆ. 2013ರಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದೇ ತಲಪಾಡಿಯಲ್ಲಿ ಗೋವಿನ ಕಾಲು ಕಡಿದು ತುಳಸಿ ಕಟ್ಟೆಯಲ್ಲಿ ಇರಿಸಲಾಗಿತ್ತು. ಈಗ ಮತ್ತೆ ಚಾಮರಾಜಪೇಟೆಯಲ್ಲಿ ಈ ಕೃತ್ಯ ನಡೆದಿದೆ. ನಮ್ಮ ಸಂಘಟನೆಯವರು ಗೋ ಹತ್ಯೆ ತಡೆಯಲು ಹೋದರೆ, ಅಕ್ರಮ ಸಾಗಾಟವನ್ನು ತಡೆದರೆ ಅವರುಗಳ ವಿರುದ್ಧ ಕೇಸು ದಾಖಲಿಸಿ, ಗಡಿಪಾರು ಪಾಡುತ್ತಾರೆ. ಆದರೆ ಇಂತಹ ಕೃತ್ಯ ನಡೆದಾಗ ಸಮಾರ್ಥನೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಮನಪಾ ಮೇಯರ್, ಉಪಮೇಯರ್, ರಾಜೇಶ್ ಕಾಗೇರಿ, ವಿಕಾಶ್, ನಂದನ್ ಮಲ್ಯ, ಪ್ರೇಮಾನಂದ ಶೆಟ್ಟಿ, ಯತೀಶ್ ಆಳ್ವಾ, ಮನಪಾ ಸದಸ್ಯರು, ಕಾರ್ಯಕರ್ತರು ಇದ್ದರು.